ಈ ಹಿಂದೆ ವಿಧಾನಸಭಾ ಕಲಾಪದ ನೇರ ವರದಿ ಮಾಡಲು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಇದೀಗ ಶಾಸಕರ ಭವನ ಪ್ರವೇಶಕ್ಕೂ ನೋ ಎಂಟ್ರಿ ಎಂದಿದ್ದಾರೆ. ಶಾಸಕರ ಭವನದ ಭದ್ರತಾ ಅಧಿಕಾರಿಗಳಿಗೆ ಹಾಗೂ ಶಾಸಕರ ಭವನದ ಅಧೀನ ಕಾರ್ಯದರ್ಶಿಗೆ ಮಾಧ್ಯಮಗಳಿಗೆ ಪ್ರವೇಶ ನೀಡದಂತೆ ಸ್ಪೀಕರ್ ಕಾಗೇರಿ ಅವರು ಸೂಚನೆ ನೀಡಿದ್ದಾರೆ. ಶಾಸಕರ ಭವನ ಶಾಸಕರ ಖಾಸಗಿ ಸಮಯ ಕಳೆಯಲು ಇರುವ ಸ್ಥಳವಾಗಿದೆ. ಶಾಸಕರ ಭವನಕ್ಕೆ ಮಾಧ್ಯಮ ಪ್ರವೇಶದಿಂದ ಶಾಸಕರ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂದು ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ.
ಈ ಮೊದಲು ಶಾಸಕರ ಭವನದಲ್ಲಿನ ಅವ್ಯವಸ್ಥೆ, ಶಾಸಕರ ಬೆಂಬಲಿಗರ ಪುಂಡಾಟ, ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದವು. ಹೀಗಾಗಿ ಶಾಸಕರು, ಶಾಸಕರ ಬೆಂಬಲಿಗರ ಚಲನವಲನಗಳು ಮೀಡಿಯಾ ಕಣ್ಣಿಗೆ ಬೀಳಬಾರದು ಎಂಬ ಉದ್ದೇಶದಿಂದ ಸ್ಪೀಕರ್ ಅವರು ಈ ಆದೇಶ ಹೊರಡಿಸಿದ್ದಾರೆ ಎನ್ನಲಾಗುತ್ತಿದೆ.







