ಮಂಡ್ಯ: ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೊನಾ ಓಟಕ್ಕೆ ಬ್ರೇಕ್ ಹಾಕಲು ಇನ್ನೊಂದು ವಾರ ಲಾಕ್ಡೌನ್ ಬೇಕೇಬೇಕು ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಚಿವ ಕೆ.ಸಿ ನಾರಾಯಣ ಸ್ವಾಮಿ ಮತ್ತೆ ಲಾಕ್ಡೌನ್ ವಿಸ್ತರಣೆಯಾಗಲಿದೆ ಎಂಬುದರ ಸುಳಿವು ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಸಿ ನಾರಾಯಣಗೌಡ, ಬೆಂಗಳೂರು ನಗರದಲ್ಲಿ ಲಾಕ್ಡೌನ್ ವಿಸ್ತರಣೆಯಾಗುವ ಸಂದರ್ಭ ಬರಬಹುದು ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಹಾಗೂ ಮುಂಬೈನಿಂದ ಬಂದವರಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಗಿದೆ. ಸೋಂಕು ಹರಡುವುದಕ್ಕೆ ಕಡಿವಾಣ ಹಾಕಲು ಲಾಕ್ಡೌನ್ ಅಗತ್ಯವಾಗಿದೆ. ಈ ವಾರ ಲಾಕ್ಡೌನ್ ಮಾಡಿದ್ದರಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಮಾಹಿತಿ ಇದೆ. ಹೀಗಾಗಿ ಮತ್ತೆ ಲಾಕ್ಡೌನ್ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ ದೃಷ್ಟಿಯಿಂದ ಮತ್ತೆ ಲಾಕ್ಡೌನ್ ವಿಸ್ತರಣೆ ಸಾಧ್ಯವೇ ಇಲ್ಲ ಎಂದು ನಿನ್ನೆ ಸಿಎಂ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಇನ್ನೊಂದು ವಾರ ಲಾಕ್ಡೌನ್ ವಿಸ್ತರಣೆ ಆಗಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದರು.
ಸಿಎಂ ಯಡಿಯೂರಪ್ಪ ಅವರ ಖಡಕ್ ನಿಲುವಿನ ನಡುವೆಯೂ ತಜ್ಞರಿಂದ ಲಾಕ್ಡೌನ್ ವಿಸ್ತರಣೆ ಮಾಡುವಂತೆ ಒತ್ತಡ ರುತ್ತಿದೆ. ಹೀಗಾಗಿ ಸಿಎಂ ನಿರ್ಧಾರದ ಮೇಲೆ ಲಾಕ್ಡೌನ್ ಭವಿಷ್ಯ ನಿಂತಿದೆ.







