ಸತತ 2ನೇ ಪಂದ್ಯದಲ್ಲೂ ಸೋತ ಹಾಲಿ ಚಾಂಪಿಯನ್ಸ್, ದಕ್ಷಿಣ ಆಫ್ರಿಕಾ ಎದುರು ಶರಣಾದ ವೆಸ್ಟ್ ಇಂಡೀಸ್..!
ಹಾಲಿ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ಯುಎಇನಲ್ಲಿ ಮತ್ತೊಮ್ಮೆ ಟಿ20 ವಿಶ್ವಕಪ್ ಎತ್ತುವ ಲಕ್ಷಣ ಕಾಣುತ್ತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಲೀಗ್ ಪಂದ್ಯವನ್ನು ಸೋತ ವಿಂಡೀಸ್ ಮುಂದೆ ಸಾಕಷ್ಟು ಸವಾಲುಗಳಿವೆ. ಮೊದಲ ಪಂದ್ಯವನ್ನು ಸೋತಿದ್ದ ದಕ್ಷಿಣ ಆಫ್ರಿಕಾ ವಿಂಡಿಸ್ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಖಾತೆ ತೆರೆದು ಪೈಪೋಟಿಗೆ ಬಿದ್ದಿದೆ.
ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆರಿಸಿಕೊಂಡಿತು. ಇನ್ನಿಂಗ್ಸ್ ಆರಂಭಿಸಿದ ಎವಿನ್ ಲೆವಿಸ್ ಬಿರುಸಿನ ಆಟವಾಡಿದರೆ, ಲೆಂಡ್ಲ್ ಸಿಮನ್ಸ್ ರನ್ಗಾಗಿ ಪರದಾಡಿದ್ರು. ಲೆವಿಸ್ 35 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಫೋರ್ ನೆರವಿನಿಂದ 56 ರನ್ ಗಳಿಸಿ ಮೊದಲಿಗರಾಗಿ ಔಟಾದರು, ಸಿಮನ್ಸ್ 35 ಎಸೆತಗಳನ್ನು ಎದುರಿಸಿ 15 ರನ್ ಗಳಿಸಿದ್ದು ತಂಡಕ್ಕೆ ದುಬಾರಿ ಆಯಿತು.
ನಿಕೊಲಕಸ್ ಪೂರನ್ ಮತ್ತು ಕ್ರಿಸ್ ಗೇಯ್ಲ್ ತಲಾ 12 ರನ್ ಗಳಿಸಲಷ್ಟೇ ಶಕ್ತರಾದರು. ಆಂಡ್ರೆ ರಸೆಲ್ ಮತ್ತು ಶಿಮ್ರನ್ ಹೆಟ್ಮಯರ್ ಸ್ಲಾಗ್ ಓವರುಗಳಲ್ಲಿ ರನ್ ಗಳಿಸಲು ವಿಫಲರಾದರು. 20 ಎಸೆತಗಳಲ್ಲಿ 26 ರನ್ಗಳಿಸಿದ ಪೊಲಾರ್ಡ್ ಹರಿಣಗಳ ಅದ್ಭುತ ಫೀಲ್ಡಿಂಗ್ ಗೆ ಬಲಿಯಾದರು. 20 ಓವರುಗಳಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ ಕಳೆದುಕೊಂಡು 143 ರನ್ಗಳಿಸಿತು. ದಕ್ಷಿಣ ಆಫ್ರಿಕಾದ ಬೌಲಿಂಗ್ ನಲ್ಲಿ ಪ್ರಿಟೊರಿಯಸ್ 3 ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ 2 ವಿಕೆಟ್ ಪಡೆದುಕೊಂಡರು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ನಾಯಕ ತೆಂಬ ಬವುಮಾ ವಿಕೆಟ್ ಅನ್ನು ರನೌಟ್ ರೂಪದಲ್ಲಿ ಕಳೆದುಕೊಂಡಿತು. ಆದರೆ ರಿಝಾ ಹೆಂಡ್ರಿಕ್ಸ್ ಮತ್ತು ರಾಸಿ ವಾಂಡರ್ ಡ್ಯೂಸನ್ ಇನ್ನಿಂಗ್ಸ್ ನಿಭಾಯಿಸಿ ರನ್ ರೇಟ್ ಮೈಂಟೇನ್ ಮಾಡಿದರು. ಹೆಂಡ್ರಿಕ್ಸ್ 39 ರನ್ ಗಳಿಸಿ ಔಟಾದರು.
ವಾಂಡರ್ ಡ್ಯೂಸನ್ ಜೊತೆ ಸೇರಿದ ಏಡಿಯನ್ ಮಾರ್ಕ್ ರಾಂ ವಿಂಡೀಸ್ ಲೆಕ್ಕಾಚಾರ ತಲೆ ಕೆಳಗೆ ಮಾಡಿದರು. ವಾಣಂಡರ್ ಡ್ಯೂಸನ್ ನಿಧಾನವಾಗಿ ಆಡಿದರೆ ಮಾರ್ಕ್ ರಾಂ ಅಬ್ಬರದ ಆಟ ಆಡಿದರು. ಮಾರ್ಕ್ ರಾಂ 26 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು. ವಾಂಡರ್ ಡ್ಯೂಸನ್ 43 ರನ್ ಗಳಿಸಿ ಅಜೇಯರಾಗುಳಿದರು. ದಕ್ಷಿಣ ಆಫ್ರಿಕಾ 18.2 ಓವರುಗಳಲ್ಲಿ ಗುರಿ ಮುಟ್ಟಿ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು.








