Nature : ಪ್ರಕೃತಿ ಎಂಬ ನಿಜ ದೈವ ಮತ್ತು ಪ್ರಕೃತಿಯನ್ನು ಪ್ರೀತಿಸುವ ಹೊಸ ಮನುಷ್ಯನ ಕುರಿತಾದ ಓಶೋ ನಿಲುವು
ಓಶೋ ತಾನು ಜೀವಿಸಿದ ಪೃಥ್ವಿಯ ಅಸಂಖ್ಯ ಸೃಷ್ಠಿಗಳ ಕುರಿತಾಗಿ ಅದಮ್ಯ ಕುತೂಹಲ ಹೊಂದಿದ್ದವರಾಗಿದ್ದು, ಅವರು ಸದಾ ಪ್ರಕೃತಿ ಎಂಬ ಮಹೋನ್ನತ ಶಕ್ತಿಯ ಕುರಿತಾಗಿ ಚಿಂತಿಸುತ್ತಿದ್ದರು ಮತ್ತು ಪ್ರಕೃತಿಯ ಚಮತ್ಕಾರವನ್ನು ದೈವ ಸಾಕ್ಷಾತ್ಕಾರ ಎಂಬಂತೆ ವರ್ಣಿಸಿ ಸತ್ಸಂಗಗಳಲ್ಲಿ ಉಪನ್ಯಾಸ ನೀಡುತ್ತಿದ್ದರು. “ನೀವು ಈ ಗ್ರಹವನ್ನು ಪ್ರೀತಿಸಬೇಕು; ಅದು ಪರಮಾತ್ಮನನ್ನು ಪ್ರೀತಿಸಿದಷ್ಟೆ ಆನಂದದಾಯಕ. ಈ ಗ್ರಹದ ಒಡನಾಟವನ್ನು ಆನಂದಿಸಬೇಕು. ಇದು ನಮಗೆಲ್ಲರಿಗೂ ಜನ್ಮಜಾತವಾಗಿ ನೀಡಲ್ಪಟ್ಟ ವಿಶೇಷ ಉಡುಗೊರೆ” ಎನ್ನುತ್ತಿದ್ದರು ಓಶೋ.
ಓಶೋ ಪ್ರಕಾರ ದೇವರು ಎನ್ನುವ ಸೀಮೆಗಳ ನಡುವೆ ಬಂಧಿಯಾದ ಸಂಪ್ರದಾಯಶೀಲ ಮನುಷ್ಯನಿಗೆ ಪ್ರಕೃತಿಯ ಅಗಾಧ ಶಕ್ತಿಯ ಅರಿವಿರುವುದಿಲ್ಲ. ಅವನು ತನ್ನ ಸುತ್ತಲಿರುವ ಅಷ್ಟೂ ಶಕ್ತಿಯನ್ನು ತನ್ನ ಕಲ್ಪನೆಯ ದೇವರ ಜೊತೆ ಬೆರೆಸಿ ಜೋಡಿಸಿಬಿಡುತ್ತಾನೆ. ಪ್ರಕೃತಿ ಎಂಬ ದೇವರೇ ನಿಜವಾದ ದೈವ ಅನ್ನುವ ಅರಿವಿರುವಾತನೇ ಹೊಸ ಮನುಷ್ಯ. ಈ ಹೊಸ ಮನುಷ್ಯ ಮಾತ್ರ ಹಳೆಯ ಕಂದಾಚಾರಗಳನ್ನು ಧಿಕ್ಕರಿಸಿ ಹೊಸ ಯೋಚನೆ ಮಾಡಬಲ್ಲ ಮತ್ತು ವಾಸ್ತವದ ಸತ್ಯವನ್ನು ಸ್ವೀಕರಿಸಬಲ್ಲ.
ಈ ಹೊಸ ಮನುಷ್ಯ ಐಹಿಕವಾಗಿರುತ್ತಾನೆ. ʻಐಹಿಕ’ ಎಂದರೆ ಭೌತಿಕ ಎಂದರ್ಥವಲ್ಲ. ಹೊಸ ಮನುಷ್ಯ ವಾಸ್ತವವಾದಿ; ಅವನು ಈ ಭೂಮಿಯನ್ನು ಪ್ರೀತಿಸುವನು ಮತ್ತು ಪ್ರಕೃತಿಯೆಂಬ ಚಿನ್ಮಯೀ ಶಕ್ತಿಯನ್ನು ಆರಾಧಿಸುವವನು. ಹಳೆಯ ಕಂದಾಚಾರಿಗಳು ಈ ಭೂಮಿಯನ್ನು ಪ್ರೀತಿಸದ ಕಾರಣ ತಥಾಕಥಿತ ಧರ್ಮ ವ್ಯಾಖ್ಯಾನಗಳು ಈ ಸುಂದರ ಭೂಮಿಯನ್ನು ಪ್ರೀತಿಸುವುದನ್ನು ಕಲಿಸಿಲ್ಲ. ಪ್ರಕೃತಿಯ ಮಹೋತ್ತಮ ಕಾಣಿಕೆಯಾದ ಈ ಭೂ ಗ್ರಹ ಅತ್ಯಂತ ಸುಂದರವಾದದ್ದು. ಇದ್ಯಾಕೆ ಸುಂದರ ಎಂದು ನೀವು ಪ್ರಶ್ನಿಸುವುದಾದರೇ, ಅದಕ್ಕೆ ಉತ್ತರ ಈ ಗ್ರಹ ಜೀವಂತವಾಗಿದೆ. ನಮ್ಮ ಈ ಮನುಷ್ಯ ದೇಹವು ಹಲವಾರು ರಹಸ್ಯಗಳನ್ನು ಒಳಗೊಂಡಿದೆಯಲ್ಲ, ಹಾಗೆಯೇ ಈ ಗ್ರಹವೂ ಅಷ್ಟೇ ನಿಗೂಢ ರಹಸ್ಯಗಳನ್ನು ಒಳಗೊಂಡಿದೆ. ಮಾನವ ದೇಹ ಗ್ರಹದ ಭಾಗ ಅಂದರೆ ಪ್ರಕೃತಿಯ ಒಂದು ಭಾಗ. ಈ ದೇಹದಿಂದ ಮಾತ್ರ ಬುದ್ಧನೂ ಸಾಧ್ಯ, ಈಶ್ವರನೂ ಸಾಧ್ಯ. ಈ ದೇಹವೇ ದೊಡ್ಡ ಸಾಧ್ಯತೆಯ ದೇವಾಲಯ; ಬುದ್ಧತ್ವ, ನಿರ್ವಾಣ ಎರಡೂ ದೇಹದಿಂದ ಸಾಧ್ಯ ಅಂದರೆ ಪ್ರಕೃತಿಯಿಂದ ಸಾಧ್ಯ. ಯಾವುದೋ ಕಾಲ್ಪನಿಕ ಶಿಲೆಯ ಪ್ರತಿಮೆಯಿಂದ ಅಲ್ಲ. ಈ ಮನುಷ್ಯ ದೇಹವನ್ನು ಪ್ರೀತಿಸಬೇಕು, ಹಾಗಾದಾಗ ಮಾತ್ರ ಈ ಜೀವಂತಿಕೆಯ ಭೂಮಿಯನ್ನು ಪ್ರೀತಿಸಿದಂತೆ, ಪ್ರಕೃತಿಯನ್ನು ಪ್ರೀತಿಸಿದಂತೆ, ನಿಜಾರ್ಥದಲ್ಲಿ ಭಗವಂತನನ್ನು ಪ್ರೀತಿಸಿದಂತೆ.
ಹೊಸ ಮನುಷ್ಯ ನಿತ್ಯವೂ ಉಸಿರಾಡುವ ಸದಾ ಲವಲವಿಕೆಯ ಪ್ರಕೃತಿಯಲ್ಲಿ ತನ್ನ ಧರ್ಮವನ್ನು ಕಂಡುಕೊಳ್ಳುತ್ತಾನೆಯೇ ಹೊರತು, ಯಾವುದೋ ಗಂಧ ಮೆತ್ತಿದ ಕಲ್ಲಿನ ಪ್ರತಿಮೆಗಳಲ್ಲಿ ಅಲ್ಲ. ಹೊಸ ಮನುಷ್ಯ ಪ್ರಕೃತಿಯ ಪ್ರತೀ ಆಯಾಮವನ್ನೂ ಕುತೂಹಲದಿಂದ ಕಾಣುತ್ತಾನೆ, ಗೌರವಿಸುತ್ತಾನೆ, ಅಷ್ಟೇ ಉತ್ಕಟವಾಗಿ ಅನುಭವಿಸುತ್ತಾನೆ, ಕ್ರಮೇಣ ಪ್ರಕೃತಿಯ ಮೇಲಿನ ಮೋಹದಿಂದಲೇ ಪರಮಾತ್ಮನನ್ನು ತಲುಪುವ ಪ್ರಯತ್ನ ಮಾಡುತ್ತಾನೆ. ಗಿಡ-ಮರಗಳ ನೃತ್ಯವನ್ನು ಆನಂದಿಸುತ್ತಾನೆ. ಸಮುದ್ರದ ಅಲೆಗಳ ಮೇಲೆ ತನ್ನದೇ ಅಂತರಂಗದ ತುಮುಲ ಹುಡುಕುತ್ತಾನೆ. ಪರ್ವತಶ್ರೇಣಿಯ ನೆತ್ತಿಯಲ್ಲಿ ಪರಶಿವನ ಕೈಲಾಸ ಕಾಣುತ್ತಾನೆ. ಹಿಮವೃಷ್ಟಿಯಲ್ಲಿ ದೇವಲೋಕದ ವೈಭವ ಕಲ್ಪಿಸಿಕೊಳ್ಳುತ್ತಾನೆ. ಚಂದ್ರ-ನಕ್ಷತ್ರಗಳ ಒಡ್ಡೋಲಗದಲ್ಲಿ ಅಮರಾವತಿಯ ಇಂದ್ರ ಸಭೆಯನ್ನು ಕಂಡಂತೆ ಪುಳಕಗೊಳ್ಳುತ್ತಾನೆ. ಹೊಸ ಮನುಷ್ಯನ ಅಸ್ಥಿತ್ವ ಮತ್ತು ಈ ಜೀವಂತ ಭೂಮಿಯ ಅಸ್ಥಿತ್ವ ಎರಡೂ ಒಂದೇ. ಅದು ಪ್ರಕೃತಿಯ ಅಸ್ಥಿತ್ವ.
ಅವನು ಅಮೂರ್ತ ಕಲ್ಪನೆಗಳೊಂದಿಗೆ ಬದುಕನ್ನು ಮೂಟೆಕಟ್ಟಿ ಇಡುವುದಿಲ್ಲ. ಅವನು ವಾಸ್ತವದ ಸತ್ಯಗಳೊಂದಿಗೆ ಮುಖಾಮುಖಿಯಾಗುತ್ತಾನೆ. ಅವನ ಬದ್ಧತೆ ಪ್ರಕೃತಿಯ ಅಸಲಿ ಅಸ್ಥಿತ್ವದ ಮೇಲಿರುತ್ತದೆ. ಆ ಬದ್ಧತೆಯ ಮೂಲಕ ಅವನು ಸೂಪರ್-ನೇಚರ್ ಗತಿಯನ್ನು ತಿಳಿದುಕೊಳ್ಳುತ್ತಾನೆ. ದೇವರು ಮತ್ತೆಲ್ಲೋ ಇಲ್ಲ; ಈ ಭೂಮಿಯಲ್ಲಿ, ಈ ದೇಹದಲ್ಲಿ, ಈ ಪ್ರಕೃತಿಯಲ್ಲಿಯೇ ಅಡಗಿದ್ದಾನೆ ಎನ್ನುವ ಸರಳ ಸತ್ಯವನ್ನು ಹೊಸ ಮನುಷ್ಯ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾನೆ. ಈ ಸರಳ ಸತ್ಯವನ್ನು ನೀವೂ ಅರ್ಥ ಮಾಡಿಕೊಳ್ಳಬೇಕೆಂದರೆ ಅದಕ್ಕೆ ಯಾವುದೋ ಧರ್ಮ ಪಂಡಿತರ ವ್ಯಾಖ್ಯಾನಗಳ ಅಗತ್ಯವಿಲ್ಲ, ಧರ್ಮಗ್ರಂಥಗಳನ್ನು ಓದಬೇಕಿಲ್ಲ. ಈ ದೇಹವೇ ಬುದ್ಧ. ಈ ದೇಹವೇ ಈಶ್ವರ, ಈ ದೇಹವೇ ಸಮಸ್ತ ಕೋಟಿ ಬ್ರಹ್ಮಾಂಡ ಅಧಿದೇವತೆಗಳ ನೆಲೆ. ಈ ದೇಹವನ್ನು ಹೊತ್ತ ಭೂಮಿ ಸ್ವರ್ಗ. ಬೂಮಿಯನ್ನು ಸೃಷ್ಟಿಸಿದ ಪ್ರಕೃತಿ ನಿಜವಾದ ದೈವ.
ಹೊಸ ಮನುಷ್ಯ ಧರ್ಮಗ್ರಂಥಗಳ ಬದಲಿಗೆ ಕೇವಲ ಪ್ರಕೃತಿಯ ಗ್ರಂಥವನ್ನು ಮಾತ್ರ ಓದುತ್ತಾನೆ. ಇದೇ ಅವನ ವೇದ, ಅವನ ಕುರಾನ್, ಅವನ ಬೈಬಲ್. ಇಲ್ಲಿ ಅವನು ಕಲ್ಲು-ಮಣ್ಣುಗಳಲ್ಲಿ, ತರುಲತೆಗಳಲ್ಲಿ, ಜೀವಕೋಟಿಯಲ್ಲಿ ಧರ್ಮೋಪದೇಶಗಳನ್ನು ಆಲಿಸುತ್ತಾರೆ. ಅವನು ಪ್ರಕೃತಿಯ ಮೂಲಕ ಜೀವನದ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಅವನು ತನ್ನ ಜೀವನವನ್ನು ದೇವರೆಂಬ ಪ್ರತಿಮೆಯ ಎದುರು ದಾಸ್ಯಕ್ಕೆ ಇಡುವುದಿಲ್ಲ, ತನ್ನ ಬದುಕನ್ನು ಕರ್ಮಠತನಗಳ ಅಡಿಯಾಳಾಗಿ ನಿರ್ಲಕ್ಷಿಸಲು ಪ್ರಯತ್ನಿಸುವುದಿಲ್ಲ. ಅವನು ಪ್ರಕೃತಿಯ ರಹಸ್ಯಗಳನ್ನು ಪ್ರೀತಿಸಲು ಆರಂಭಿಸುತ್ತಾನೆ. ತನ್ಮೂಲಕ ಆ ರಹಸ್ಯಗಳಲ್ಲಿ ಪ್ರವೇಶಿಸಲು ಪ್ರಯತ್ನಿಸುತ್ತಾನೆ. ಹೀಗಾಗೇ ಅವನು ಕವಿಯಾಗುತ್ತಾನೆಯೇ ಹೊರತು ತತ್ವಜ್ಞಾನಿಯಾಗುವುದಿಲ್ಲ. ಅವನು ಕಲಾವಿದನಾಗುತ್ತಾನೆಯೇ ಹೊರತು ಧರ್ಮಶಾಸ್ತ್ರಜ್ಞನಾಗುವುದಿಲ್ಲ. ಅವನ ವಿಜ್ಞಾನ ವಿಭಿನ್ನ ಧ್ವನಿಯನ್ನು ಹೊಂದಿರುತ್ತದೆ. ಅವನ ವಿಜ್ಞಾನ ತರ್ಕಬದ್ಧವಾಗಿರುತ್ತದೆ ಹಾಗೂ ವಾಸ್ತವದ ಜೊತೆ ಸಂಬಂಧ ಕಲ್ಪಿಸಿಕೊಳ್ಳುತ್ತದೆ.
ಪ್ರಕೃತಿಯ ಮಹತ್ವ ಅರ್ಥ ಮಾಡಿಕೊಂಡ ಹೊಸ ಮನುಷ್ಯ ಎಂದಿಗೂ ಪ್ರಕೃತಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುವುದಿಲ್ಲ. ಅವನಿಗೆ ಗೊತ್ತು ಅಂತದ್ದೊಂದು ಪ್ರಯತ್ನ ಕೇವಲ ಮೂರ್ಖತನ ಅಷ್ಟೆ. ನೀವು ಪ್ರಕೃತಿಯನ್ನು ಹೇಗೆ ಜಯಿಸಬಹುದು ಅನ್ನುವುದಕ್ಕಿಂತ ಪ್ರಕೃತಿಯ ಭಾಗವಾಗಿ ಹೇಗೆ ಅದರ ಒಲುಮೆಗೆ ಪಾತ್ರರಾಗಬಹುದು ಎಂದು ಯೋಚಿಸಿ. ಪ್ರಕೃತಿ ಪ್ರಣೀತ ವಿಜ್ಞಾನ ಪ್ರಕೃತಿಯನ್ನು ಅರ್ಥಮಾಡಿಕೊಳ್ಳುತ್ತದೆಯೇ ಹೊರತು ಪ್ರಕೃತಿಯನ್ನು ಗೆಲ್ಲುವಂತದ್ದಲ್ಲ. ಪ್ರಕೃತಿಯನ್ನು ಅತ್ಯಾಚಾರ ಮಾಡುವುದು ನಿಜವಾದ ಪಾಪ, ಪ್ರಕೃತಿಯನ್ನು ಪ್ರೀತಿಸುತ್ತಾನೆ ನಿಜವಾದ ಸುಕೃತ. ಇಷ್ಟು ಅರ್ಥ ಮಾಡಿಕೊಂಡು ಬದುಕಿದರೆ ನಿಮ್ಮ ಬದುಕು ಇಷ್ಟು ಯಾತನಮಯವಾಗಿರುವುದಿಲ್ಲ. ಕಣಕಣಗಳಲ್ಲಿ ಭಗವಂತನಿದ್ದಾನೆ ಎಂದು ನಂಬುವುದಾದರೇ ಈ ಪ್ರಕೃತಿಯ ಅಣುರೇಣು ತೃಣಕಾಷ್ಠಗಳನ್ನೂ ಪ್ರೀತಿಸಿ ಅಷ್ಟೇ.
-ನಿರೂಪಣೆ: ವಿಶ್ವಾಸ್ ಭಾರದ್ವಾಜ್ (ವಿಭಾ)










