ಹೈಕೋರ್ಟ್ ನ್ಯಾಯಾದೀಶರಿಗೆ ಜೀವ ಬೆದರಿಕೆ | ಎಫ್.ಐ.ಆರ್. ದಾಖಲು
ಬೆಂಗಳೂರು: ಹಿಜಾಬ್ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳಿಗೆ ತಮಿಳುನಾಡು ಮೂಲದ ಮುಸ್ಲಿಂ ಸಂಘಟನೆಯ ಮುಖಂಡ ಜೀವ ಬೆದರಿಕೆ ಹಾಕಿದ್ದಾನೆ
ಈ ಸಂಭಂದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸಂಘಟನೆಯ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೇ ನ್ಯಾಯಾದೀಶರಿಗೆ ಬೆದರಿಕೆ ಹಾಕಿದ ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಮನವಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 506(ಬೆದರಿಕೆ), 501(1)(ಮಾನಹಾನಿ), 503(ಕ್ರಿಮಿನಲ್ ಬೆದರಿಕೆ), 109(ಪ್ರಚೋದನೆ), 504(ಶಾಂತಿ ಭಂಗ), 505(ಸಾರ್ವಜನಿಕ ಕಿಡಿಗೇಡಿತನ) ಸೇರಿದಂತೆ ವಿವಿಧ ಸೆಕ್ಷನ್‌ಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ರಾಜ್ಯದ ಪೊಲೀಸ್ ಮುಖ್ಯಸ್ಥರು ಆರೋಪಿಯ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸುವಂತೆ ತಮಿಳುನಾಡು ಪೊಲೀಸ್ ಮುಖ್ಯಸ್ಥರೊಂದಿಗೆ ಕೂಡ ಚರ್ಚಿಸಿದ್ದಾರೆ. ಈಗ ಹೈಕೋರ್ಟ್ ಈ ಸಂಬಂಧ ಆರೋಪಿ ವಿರುದ್ಧ ವಿಚಾರಣೆ ನಡೆಸಲು ಕ್ರಿಮಿನಲ್ ನ್ಯಾಯಾಂಗ ನಿಂದನೆ ಆರೋಪದಡಿ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದೆ.
ಘಟನೆ: ಮಾರ್ಚ್ 17ರಂದು ತಮಿಳುನಾಡು ತೌಹೀದ್ ಜಮಾತ್ (ಟಿ.ಎಮ್.ಟಿ.ಜೆ) ಹೆಸರಿನ ಮುಸ್ಲಿಂ ಸಂಘಟನೆಯ ಮುಖಂಡ ಆರ್. ರಹಮತುಲ್ಲಾ ಮಧುರೈನಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ.
ಹಿಜಾಬ್ ತೀರ್ಪಿನ ಕಾರಣಕ್ಕಾಗಿ ನ್ಯಾಯಮೂರ್ತಿಗಳು ಕೊಲೆಯಾದರೆ ಸಾವಿಗೆ ಅವರೇ ಕಾರಣರಾಗುತ್ತಾರೆ. ಮೋದಿ, ಅಮಿತ್ ಶಾ ಅಥವಾ ಯೋಗಿ ಆದಿತ್ಯನಾಥ್ಗೆ ಹೆದರುವುದಿಲ್ಲ. ಅಲ್ಲಾಗೆ ಮಾತ್ರ ಹೆದರುವುದು. ನಮ್ಮನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡಬೇಡಿ. ಒಂದು ತಾಳ್ಮೆ ಕಳೆದುಕೊಂಡರೆ ನೀವು ಉಳಿವುದಿಲ್ಲ ಎಂದು ಹೇಳಿದ್ದ.







