B K Hariprasad | ಗೃಹ ಸಚಿವರ ಮೂಲ ಕೇಶವ ಕೃಪವೋ? ಹಾವಿನ ಪುರವೋ?
ಬೆಂಗಳೂರು : ಚಂದ್ರು ಕೊಲೆ ಸಂಬಂಧ ತಮ್ಮ ಸ್ಥಾನದ ಜ್ಞಾನವೇ ಇಲ್ಲದ ಆರಗ ಜ್ಞಾನೇಂದ್ರ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಜೆಜೆ ನಗರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಗೊಂದಲದ ಹೇಳಿಕೆ ಹಿನ್ನೆಲೆ ಬಿ.ಕೆ.ಹರಿಪ್ರಸಾದ್ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪರಸ್ಪರ ಬೈಕ್ ಸವಾರರ ನಡುವೆ ವಾಗ್ವಾದ ನಡೆದು ಚಂದ್ರು ಎಂಬ ಯುವಕ ಕೊಲೆಯಾಗಿದ್ದಾನೆ. ಘಟನೆಯ ಬಗ್ಗೆ ಸತ್ಯಾಸತ್ಯತೆಯನ್ನು ಪೊಲೀಸ್ ಕಮಿಷನರ್ ಕಮಲ್ ಪಂತ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ತಪ್ಪಿತಸ್ಥರನ್ನ ಬಂಧಿಸಲಾಗಿದೆ ಎಂದು ಹೇಳಿಯಾಗಿದೆ.
ಹಾಗಿದ್ದರೂ ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಬೇಜವಾಬ್ದಾರಿ ಹೇಳಿಕೆ ನೀಡಿ ಘಟನೆಗೆ ಕೋಮು ಬಣ್ಣ ಬಳಿದಿದ್ದಾರೆ” ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.
ಅಲ್ಲದೇ ತಮ್ಮ ಸ್ಥಾನದ ಜ್ಞಾನವೇ ಇಲ್ಲದ ಆರಗ ಜ್ಞಾನೇಂದ್ರ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ನಡೆದು ಕೆಲವೇ ಕ್ಷಣಗಳಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವರು, ಚಂದ್ರು ಎಂಬ ದಲಿತ ಹುಡುಗನನ್ನು ಗುಂಪೊಂದು ಅಡ್ಡಗಟ್ಟಿ ಉರ್ದು ಮಾತಾಡುವಂತೆ ಒತ್ತಾಯಿಸಿದೆ, ಆತನಿಗೆ ಉರ್ದು ಬರುತ್ತಿರಲಿಲ್ಲ ಹೀಗಾಗಿ ಚುಚ್ಚಿ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ಸ್ವತಃ ಗೃಹ ಸಚಿವ ಯಾವ ಪೊಲೀಸ್ ತನಿಖೆಯೂ ನಡೆಯದೇ ಸ್ವಯಂ ಘೋಷಿತ ತೀರ್ಪು ನೀಡಿ ಕೋಮು ಬಣ್ಣ ಕಟ್ಟಿ ಮತೀಯ ಭಾವನೆ ಕೆರಳಿಸುವಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಗೃಹ ಸಚಿವರ ವಿರುದ್ಧ ಹರಿಪ್ರಸಾದ್ ಗುಡುಗಿದ್ದಾರೆ. b-k-hariprasad-slams home minister araga jnanendra