Karnataka: ವಿಧಾನಮಂಡಲ ಅಧಿವೇಶನ – ಕಲಾಪದಲ್ಲಿ ಸಚಿವ ಉಮೇಶ್ ಕತ್ತಿ, ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಂತಾಪ..
ಇಂದಿನಿಂದ ಹತ್ತು ದಿನಗಳ ಕಾಲ ನಡೆಯುವ ಕರ್ನಾಟಕ ವಿಧಾನಮಂಡಲ ಅಧಿವೇಶನ ಇಂದು ಆರಂಭಗೊಂಡಿದೆ. ಸೆಪ್ಟೆಂಬರ್ 23ರ ತನಕ ಉಭಯ ಸದನಗಳು ಕಾರ್ಯಕಲಾಪ ನಿರ್ವಹಿಸಲಿವೆ. ವಂದೇ ಮಾತರಂ ಗೀತೆಯ ಮೂಲಕ ಮೊದಲ ದಿನದ ಕಲಾಪವನ್ನ ಆರಂಭಿಸಲಾಗಿದೆ.
ಸಚಿವ ಉಮೇಶ್ ಕತ್ತಿ, ಮಾಜಿ ಸಚಿವ ಪ್ರಭಾಕರ್ ರಾಣೆ, ಮಾಜಿ ಶಾಸಕ ಎ ಕೆಂಪೇಗೌಡ, ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿ ಮಾಜಿ ಶಾಸಕ ದೇಸಾಯಿ, ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಸ್ಪೀಕರ್ ಕಾಗೇರಿಯವರು ಮೊದಲಿಗೆ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಕ ಪ್ರಸ್ತಾವ ಮಂಡಿಸಿದರು. ನಂತರ ಉಳಿದ ಗಣ್ಯರು ಹಾಗೂ ಇಂಗ್ಲೆಂಡ್ ರಾಣಿ ಎಲಿಜಬೆತ್ ನಿಧನಕ್ಕೆ ಸಂತಾಪ ಸೂಚಕ ನಿರ್ಣಯ ಮಂಡಿಸಿದರು.
ಪಡಿತರ ಪೂರೈಕೆಯಲ್ಲಿ ರಾಗಿ ಮತ್ತು ಜೋಳವನ್ನು ಸೇರ್ಪಡೆಗೊಳಿಸಲು ದಿವಂಗತ ಉಮೇಶ್ ಕತ್ತಿ ಅವರ ಕೊಡುಗೆ ಸ್ಮರಣೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ತಿಳಿಸಿದರು.
ಉಮೇಶ್ ಕತ್ತಿ ಅವರು ಕ್ರಿಯಾಶೀಲ ರಾಜಕಾರಣಿಯಾಗಿದ್ದರು. ಸಂಕೇಶ್ವರ-ಹುಕ್ಕೇರಿ ಭಾಗದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ಮಾಣದಲ್ಲಿ ಅವರ ಕುಟುಂಬ ಪ್ರಮುಖ ಪಾತ್ರ ವಹಿಸಿತ್ತು. 25ನೇ ವಯಸ್ಸಿಗೆ ವಿಧಾನಸಭೆ ಪ್ರವೇಶಿಸಿದ ಅವರು, ಹಂತ ಹಂತವಾಗಿ ಬೆಳೆದು ಬಂದಿದ್ದರು. ಬಂದೀಖಾನೆ, ತೋಟಗಾರಿಕೆ, ಲೋಕೋಪಯೋಗಿ ಸೇರಿದಂತೆ ಹಲವು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಅವರು, ಇತ್ತೀಚೆಗೆ ಪಡಿತರ ಪೂರೈಕೆಯಲ್ಲಿ ರಾಗಿ ಮತ್ತು ಜೋಳವನ್ನು ಸೇರ್ಪಡೆಗೊಳಿಸಲು ಪ್ರಮುಖ ಕಾರಣರಾಗಿದ್ದರು. ಇದು ದೇಶದಲ್ಲಿಯೇ ಅತ್ಯುತ್ತಮ ನಿರ್ಧಾರವಾಗಿದೆ ಎಂದರು.








