ಮೈಸೂರು : ಇಂದು ಆಷಾಢ ಶುಕ್ರವಾರ, ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರ ಲಕ್ಷಾಂತರ ಜನ ಭಕ್ತರು ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದ್ರೆ ಕೊರೊನಾ ವೈರಸ್ ಸೋಂಕು ಹಿನ್ನೆಲೆ ಈ ಬಾರಿ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಆಷಾಢ ಶುಕ್ರವಾರ ಹಾಗೂ ಅಮ್ಮನವರ ಜನ್ಮೋತ್ಸವದಂದು ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿಷೇಧ ವಿಧಿಸಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.
ಬೆಳಗ್ಗೆ ಚಾಮುಂಡಿಗೆ ಅಭಿಷೇಕ
ಕೊರೊನಾ ಭೀತಿಯಿಂದ ಭಕ್ತರಿಗೆ ದೇವಾಲಯ ಪ್ರವೇಶ ನಿಷೇಧವಿದ್ದರೂ ಮೊದಲ ಆಷಾಢ ಶುಕ್ರವಾರವಾದ ಇಂದು ದೇವಾಲಯದಲ್ಲಿ ಪ್ರತಿ ಬಾರಿಯಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದಿವೆ. ಬೆಳಗ್ಗೆ ದೇವಾಲಯದ ಒಳಗೆ ಚಾಮುಂಡಿ ತಾಯಿಗೆ ಅಭಿಷೇಕ, ವಿಶೇಷ ಅಂಲಕಾರ ಹಾಗೂ ಮಹಾ ಮಂಗಳಾರತಿ ನಡೆಯಿತು.
ಈ ದಿನಗಳಲ್ಲಿ ಭಕ್ತರಿಗೆ ನೋ ಎಂಟ್ರಿ
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಈಗಾಗಲೇ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿಷೇಧ ಹಾಕಲಾಗಿದೆ. ಇದರ ಜೊತೆಗೆ ಜೂನ್ 26 ಅಂದರೆ ಇಂದಿನ ಆಷಾಢ ಶುಕ್ರವಾರ, ಜುಲೈ 3ರ ಆಷಾಢ ಶುಕ್ರವಾರ, ಜುಲೈ 10ರ ಆಷಾಢ ಶುಕ್ರವಾರ, ಜುಲೈ 17ರ ಕೊನೆಯ ಆಷಾಢ ಶುಕ್ರವಾರದ ಜೊತೆಗೆ ಜುಲೈ 13ರಂದು ಚಾಮುಂಡೇಶ್ವರಿ ಅಮ್ಮನವರ ಜನ್ಮ ವರ್ಧಂತಿ ಹಾಗೂ ಜುಲೈ 14ರ ಮಂಗಳವಾರವೂ ಸಹ ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯ ಹಾಗೂ ಉತ್ತಳಹಳ್ಳಿನಲ್ಲಿ ಶ್ರೀ ಜ್ವಾಲಾತ್ರಿಪುರ ಸುಂದರಮ್ಮಣಿ ದೇವಾಲಗಳಿಗೆ ಭಕ್ತರು ಹಾಗೂ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ.
ಇದರ ಜೊತೆಗೆ ನಗರದಲ್ಲಿರುವ ಸಣ್ಣ ಸಣ್ಣ ಚಾಮುಂಡಿ ದೇವಾಲಯಗಳಲ್ಲಿ ಪ್ರಸಾದ ಹಂಚಿಕೆ ನಿಷೇಧಿಸಲಾಗಿದೆ.