ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ನಡುವಿನ ವಾಕ್ಸಮರ ನಿಂತಂತೆ ಕಾಣುತ್ತಿಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ? ಎಂದು ವ್ಯಂಗ್ಯವಾಡುವ ಮೂಲಕ ತಮ್ಮ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ನಡೆಯುತ್ತಿರುವ ರಾಜಕೀಯವ ವೈಷಮ್ಯಕ್ಕೆ ಮತ್ತೆ ತುಪ್ಪ ಸುರಿದಿದ್ದಾರೆ.
ಬೆಳಗಾವಿ ಗ್ರಾಮೀಣ ಬಿಜೆಪಿ ಘಟಕ ಕಚೇರಿ ಉದ್ಘಾಟಿಸಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ,
ಗ್ರಾಮೀಣ ಭಾಗದ ಶಾಸಕರಿಗೆ ಹಣದ ಅಹಂಕಾರ ಇದೆ. ಕಳೆದ ಚುನಾವಣೆಯಲ್ಲಿ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ? ಕುಕ್ಕರ್ ಕೊಟ್ಟಿದ್ದು ನನ್ನ ದುಡ್ಡಿನಿಂದ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ. ಈ ಕ್ಷೇತ್ರದದಲ್ಲಿ ಈ ಬಾರಿ ಗೆಲ್ಲುಲು ಎಲ್ಲಾ ರೀತಿಯ ಸಹಾಯ ಮಾಡಲು ನಾನು ಸಿದ್ಧ. ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ. 2023ರಲ್ಲಿ ಬೆಳಗಾವಿ ಗ್ರಾಮೀಣದಲ್ಲಿ ಬಿಜೆಪಿ ಧ್ವಜ ಹಾರಿಸಲೇಬೇಕು ಎಂದು ಕರೆ ನೀಡಿದರು.
ಕಳೆದ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ನಾನು ಪ್ರಯತ್ನ ಮಾಡಿದ್ದೆ. ನನ್ನಿಂದ ಮಾಜಿ ಬಿಜೆಪಿಯ ಸಂಜಯ ಪಾಟೀಲ್‍ಗೆ ಅನ್ಯಾಯ ಆಗಿದೆ. ಬಿಜೆಪಿ ಕಾರ್ಯಕರ್ತರು ಸ್ವಂತ ಹಣದಿಂದ ಕಾರ್ಯಾಲಯ ಮಾಡಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ 2023ರಲ್ಲಿ ಇತಿಹಾಸ ಸೃಷ್ಟಿ ಮಾಡಬೇಕಿದೆ ಎಂದರು.
ಇದು ರಮೇಶ ಜಾರಕಿಹೊಳಿ ಹಾಗೂ ಸುರೇಶ ಅಂಗಡಿಯಿಂದ ಸಾಧ್ಯವಿಲ್ಲ. ಕಾರ್ಯಕರ್ತರು ಇದಕ್ಕಾಗಿ ಇತಿಹಾಸ ಸೃಷ್ಟಿಸಲು ಸಿದ್ಧರಾಗಬೇಕು. ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡೋ ಶಕ್ತಿ ಕಾರ್ಯಕರ್ತರಿಗೆ ಇದೆ ಎಂದು ಅಭಿಪ್ರಾಯಪಟ್ಟರು.








