ಫುಟ್ಬಾಲ್ ಅಭಿಮಾನಿಗಳಿಗೆ ಖುಷಿಯ ಸುದ್ದಿ, 2025ರಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಕೇರಳದ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ ಎಂದು ಕೇರಳದ ಕ್ರೀಡಾ ಸಚಿವ ಅಬ್ದುರಹಿಮಾನ್ ಘೋಷಿಸಿದ್ದಾರೆ. ಈ ಪಂದ್ಯಗಳಲ್ಲಿ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಕೂಡ ಆಡಲಿದ್ದಾರೆ ಎಂಬುದಾಗಿ ಹೇಳಲಾಗಿದೆ.
ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ಫುಟ್ಬಾಲ್ ತಂಡವು ಅಂತರಾಷ್ಟ್ರೀಯ ಪಂದ್ಯಕ್ಕಾಗಿ ಕೇರಳಕ್ಕೆ ಭೇಟಿ ನೀಡಲಿದೆ. ಈ ಉನ್ನತ ಮಟ್ಟದ ಫುಟ್ಬಾಲ್ ಪಂದ್ಯ ಆಯೋಜನೆಗೆ ಹಣಕಾಸನ್ನು ರಾಜ್ಯದ ವ್ಯಾಪಾರಿಗಳು ನೀಡಲಿದ್ದಾರೆ, ಈ ಪಂದ್ಯ ಯಶಸ್ವಿಯಾಗುವ ಭರವಸೆಯಿದೆ ಎಂದು ಕೇರಳದ ಕ್ರೀಡಾ ಸಚಿವರು ಹೇಳಿದ್ದಾರೆ.
ಕೇರಳ ರಾಜ್ಯವು ಫುಟ್ಬಾಲ್ ಕ್ರೇಜ್‌ಗಾಗಿ ಪ್ರಸಿದ್ಧವಾಗಿದ್ದು, ಭಾರತದಲ್ಲಿ ಅತಿ ಹೆಚ್ಚು ಫುಟ್ಬಾಲ್ ಆಟಗಾರರು ಮತ್ತು ಅಭಿಮಾನಿಗಳನ್ನು ಹೊಂದಿರುವ ಕೆಲವು ರಾಜ್ಯಗಳಲ್ಲಿ ಒಂದಾಗಿದೆ. ಮೆಸ್ಸಿ ಕೊನೆಯ ಬಾರಿಗೆ 2011ರಲ್ಲಿ ಭಾರತದಲ್ಲಿ ಆಡಿದ್ದು, ಈ ಬಾರಿ ಅವರ ಪುನರಾಗಮನ ದೇಶದ ಫುಟ್ಬಾಲ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮತ್ತು ಆನಂದವನ್ನು ಹುಟ್ಟುಹಾಕಲಿದೆ.