ಪಂಚಮಸಾಲಿ ಮೀಸಲಾತಿ ಪರ ಹೋರಾಟಗಾರರ ಮೇಲೆ ಲಾಠಿ ಬೀಸಿದ ಪೊಲೀಸರಿಗೆ, ರಾಜ್ಯ ಸರ್ಕಾರ ನಗದು ಬಹುಮಾನ ಘೋಷಿಸಿದೆ ಎಂಬ ಗಂಭೀರ ಆರೋಪವನ್ನು ಜೆಡಿಎಸ್ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಸುವರ್ಣಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆ ವೇಳೆ ಹೋರಾಟಗಾರರ ಮೇಲೆ ಲಾಠಿ ಬೀಸಿದ ಇನ್ಸಪೆಕ್ಟರ್ ಬಿ.ಆರ್. ಗಡ್ಡೇಕರ್ ಅವರಿಗೆ ಸರ್ಕಾರ 10,000 ರೂ. ನಗದು ಬಹುಮಾನ ಘೋಷಣೆ ಮಾಡಿದೆ ಎಂದು ಆರೋಪಿಸಿದೆ.
ಜೆಡಿಎಸ್ ಟ್ವೀಟ್ನಲ್ಲೇನಿದೆ?
“ಬೆಳಗಾವಿಯ ಸುವರ್ಣಸೌಧದ ಬಳಿ ಮೀಸಲಾತಿಗಾಗಿ ನಡೆಯುತ್ತಿದ್ದ ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಲಾಠಿಚಾರ್ಚ್ ಮಾಡಿಸಿ, ಸರ್ವಾಧಿಕಾರಿಯಂತೆ ವರ್ತಿಸಿತ್ತು. ಪಂಚಮಸಾಲಿ ಹೋರಾಟಗಾರರನ್ನು ಅಟ್ಟಾಡಿಸಿ ಹೊಡೆದು ರಕ್ತ ಹರಿಸಿದ್ದ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಹಿಟ್ಲರ್ ಸರ್ಕಾರ ಬಹುಮಾನ ಘೋಷಿಸಿದೆ. ಪ್ರತಿಭಟನಾಕಾರರ ಮೇಲೆ ಭರ್ಜರಿಯಾಗಿ ಲಾಠಿ ಬೀಸಿದ್ದಕ್ಕೆ, ಬೆಳಗಾವಿ ನಗರದ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಆರ್.ಗಡ್ಡೇಕರ ಅವರಿಗೆ ಉತ್ತಮ ಕರ್ತವ್ಯ ನಿರ್ವಹಣೆ ಹೆಸರಲ್ಲಿ 10,000 ರೂ. ಬಹುಮಾನ ನೀಡಲಾಗಿದೆ.
ಪೊಲೀಸ್ ಮಹಾ ನಿರ್ದೇಶಕರ ಪತ್ರದಲ್ಲೇನಿದೆ?
ಇನ್ಸಪೆಕ್ಟರ್ ಬಿ.ಆರ್. ಗಡ್ಡೇಕರ್ ಅವರಿಗೆ ಬಹುಮಾನ ಘೋಷಣೆ ಮಾಡಿರುವ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರ ಆದೇಶ ಪತ್ರದಲ್ಲಿ, ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಇನ್ಸಪೆಕ್ಟರ್ ಬಿ.ಆರ್. ಗಡ್ಡೇಕರ್ ಅವರಿಗೆ 10,000 ರೂ. ಬಹುಮಾನ ಘೋಷಣೆಯ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಆಕ್ರೋಶ ಮತ್ತು ಪ್ರತಿಕ್ರಿಯೆಗಳು
ಜೆಡಿಎಸ್ ಮತ್ತು ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಈ ಘಟನೆ ರಾಜ್ಯದ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.