ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಅವರ ಒಡೆತನದಲ್ಲಿದೆ ಎನ್ನಲಾದ ಹಾಸನ ನಿವೇಶನದ ವಿವಾದ ಇದೀಗ ತಾರಕಕ್ಕೇರಿದೆ. ತಮ್ಮ ಅನುಪಸ್ಥಿತಿಯಲ್ಲಿ ಕಾಂಪೌಂಡ್ ಒಡೆದು ಹಾಕಿದ್ದನ್ನು ಪ್ರಶ್ನಿಸಿ ಪುಷ್ಪ ಅರುಣ್ ಅವರು ನೇರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರ ಮೇಲೆಯೇ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಈ ಪ್ರಕರಣ ಈಗ ಮತ್ತಷ್ಟು ಕಾವು ಪಡೆದುಕೊಂಡಿದ್ದು, ಯಶ್ ತಾಯಿ ದೇವರಾಜ್ ವಿರುದ್ಧ ಅತಿಕ್ರಮ ಪ್ರವೇಶ ಹಾಗೂ ಕೊಲೆ ಬೆದರಿಕೆ ಆರೋಪ ಹೊರಿಸಿದ್ದಾರೆ.
ಪೊಲೀಸರ ಮೇಲೆ ಯಶ್ ತಾಯಿ ಆಕ್ರೋಶ
ಹಾಸನದ ವಿದ್ಯಾನಗರದಲ್ಲಿರುವ ನಿವೇಶನಕ್ಕೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ, ಯಶ್ ಅವರ ತಾಯಿ ಪುಷ್ಪ ಅವರು ತಮ್ಮ ವಕೀಲರು ಹಾಗೂ ಸಂಬಂಧಿ ದುರ್ಗಾಪ್ರಸಾದ್ ಅವರೊಂದಿಗೆ ಹಾಸನ ಬಡಾವಣೆ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಜನವರಿ 4ರಂದು ನಡೆದ ಘಟನೆಯಲ್ಲಿ, ಅವರ ನಿವೇಶನದ ಕಾಂಪೌಂಡ್ ಅನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿತ್ತು. ಈ ವಿಷಯವಾಗಿ ತೀವ್ರ ಅಸಮಾಧಾನಗೊಂಡಿದ್ದ ಪುಷ್ಪ ಅವರು, ಠಾಣೆಗೆ ಬರುತ್ತಿದ್ದಂತೆಯೇ ಪೊಲೀಸರ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದರು.
ನನ್ನ ಜಾಗದಲ್ಲಿ, ನನ್ನ ಅನುಮತಿ ಇಲ್ಲದೇ, ನಾನು ಇಲ್ಲದ ಸಮಯದಲ್ಲಿ ಕಾಂಪೌಂಡ್ ಕೆಡವಲು ಅವಕಾಶ ನೀಡಿದ್ದು ಹೇಗೆ? ಎಂದು ಖಾರವಾಗಿ ಪ್ರಶ್ನಿಸಿದರು. ಈ ವೇಳೆ ಠಾಣಾ ಇನ್ಸ್ಪೆಕ್ಟರ್ ರಾಘವೇಂದ್ರ ಪ್ರಕಾಶ್ ಅವರು ಮಧ್ಯಪ್ರವೇಶಿಸಿ ಪುಷ್ಪ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಏನಿದು ನಿವೇಶನ ವಿವಾದ?
ಹಾಸನ ವಿದ್ಯಾನಗರದಲ್ಲಿ ಯಶ್ ತಾಯಿ ಪುಷ್ಪ ಅವರು ಖರೀದಿಸಿದ್ದ ನಿವೇಶನವು ಬೇರೆಯವರ ಜಾಗವನ್ನು ಒತ್ತುವರಿ ಮಾಡಿದೆ ಎಂಬ ಆರೋಪ ಕೇಳಿಬಂದಿತ್ತು. ಮೈಸೂರಿನ ಲಕ್ಷ್ಮಮ್ಮ ಎಂಬುವವರ ಸೈಟ್ ಅನ್ನು ಪುಷ್ಪ ಅವರು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ ಎಂದು ಲಕ್ಷ್ಮಮ್ಮ ಅವರ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಹೊಂದಿರುವ ದೇವರಾಜ್ ಎಂಬುವವರು ಆರೋಪಿಸಿದ್ದರು. ಇದೇ ವಿಚಾರವಾಗಿ ದೇವರಾಜ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು ಎನ್ನಲಾಗಿದ್ದು, ಅದರಂತೆ ಕಾಂಪೌಂಡ್ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಈ ಪ್ರಕ್ರಿಯೆ ತಮಗೆ ತಿಳಿಯದಂತೆ ನಡೆದಿದೆ ಎಂಬುದು ಯಶ್ ತಾಯಿಯ ವಾದವಾಗಿದೆ.
ದಾಖಲೆಗಳ ಸಮೇತ ಪುಷ್ಪ ಅರುಣ್ ಸ್ಪಷ್ಟನೆ
ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪುಷ್ಪ ಅರುಣ್, ದೇವರಾಜ್ ಮತ್ತು ಅವರ ತಂಡದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆರು ವರ್ಷಗಳ ಹಿಂದೆ ವಿದೇಶದಲ್ಲಿದ್ದವರಿಂದ ನಾವು ಈ ಜಾಗವನ್ನು ಕಾನೂನುಬದ್ಧವಾಗಿ ಖರೀದಿಸಿದ್ದೇವೆ. ಆಸ್ತಿಯ ಸಂಪೂರ್ಣ ದಾಖಲಾತಿ ನಮ್ಮ ಬಳಿ ಇದೆ. ನಗರಸಭೆಯ ಇ-ಖಾತೆ ಕೂಡ ನಮ್ಮ ಹೆಸರಿನಲ್ಲೇ ಇದೆ. ಹೀಗಿದ್ದರೂ ಸುಖಾಸುಮ್ಮನೆ ನಮಗೆ ತೊಂದರೆ ನೀಡಲಾಗುತ್ತಿದೆ. ನ್ಯಾಯಾಲಯದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಾರದೇ ಇದ್ದರೂ, ಏಕಾಏಕಿ ಬಂದು ದಬ್ಬಾಳಿಕೆ ನಡೆಸಿ ಕಾಂಪೌಂಡ್ ಒಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಲೆ ಬಾಳುವ ವಸ್ತುಗಳ ನಾಶ ಮತ್ತು ಕಳ್ಳತನ ಆರೋಪ
ಕೇವಲ ಕಾಂಪೌಂಡ್ ಒಡೆದಿದ್ದಲ್ಲದೆ, ನಿವೇಶನದಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ನಾಶ ಮಾಡಲಾಗಿದೆ ಎಂದು ಪುಷ್ಪ ದೂರಿದ್ದಾರೆ. ನಾವು ಅಲ್ಲಿ ಶೇಖರಿಸಿಟ್ಟಿದ್ದ ವಸ್ತುಗಳನ್ನು ಹಾಳುಗೆಡವಿ, ಅತಿಕ್ರಮ ಪ್ರವೇಶ ಮಾಡಿದ್ದಾರೆ. ಇದು ನನ್ನ ಸ್ವಂತ ದುಡಿಮೆಯ ಜಾಗ. ಇಲ್ಲಿ ಅನ್ಯಾಯ ನಡೆದಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ದೂರು ಪ್ರತಿ ದೂರು: ವಿಚಾರಣೆ ತೀವ್ರ
ಪುಷ್ಪ ಅವರು ನೀಡಿದ ದೂರಿನನ್ವಯ, ಪೊಲೀಸರು ಕಾಂಪೌಂಡ್ ಒಡೆದಿದ್ದ ದೇವರಾಜ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಯಶ್ ತಾಯಿ ಇದೀಗ ದೇವರಾಜ್ ವಿರುದ್ಧ ಅತಿಕ್ರಮ ಪ್ರವೇಶ (Trespass), ಕೊಲೆ ಬೆದರಿಕೆ ಹಾಗೂ ಕಳ್ಳತನದ ಅಡಿಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಈ ಬಗ್ಗೆ ತಮ್ಮ ವಕೀಲರಾದ ಸಂಜಯ್ ಅವರು ಕಾನೂನು ಹೋರಾಟ ನಡೆಸಲಿದ್ದು, ನ್ಯಾಯಾಲಯದಲ್ಲಿ ಸಮರ್ಥ ಉತ್ತರ ನೀಡಲಿದ್ದೇವೆ ಎಂದು ಪುಷ್ಪ ತಿಳಿಸಿದ್ದಾರೆ. ಸದ್ಯ ಹಾಸನ ಪೊಲೀಸರು ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.







