ರಾಮನಗರ: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಬಣ ರಾಜಕೀಯದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ಶೀತಲ ಸಮರ ಮತ್ತೆ ಮುನ್ನೆಲೆಗೆ ಬಂದಿದ್ದು, ಇದೀಗ ಮಾಗಡಿ ಶಾಸಕ ಹಾಗೂ ಡಿಕೆಶಿ ಆಪ್ತ ಬಳಗದ ಪ್ರಮುಖ ನಾಯಕ ಹೆಚ್.ಸಿ. ಬಾಲಕೃಷ್ಣ ಅವರು ಉಪಮುಖ್ಯಮಂತ್ರಿ ಪರವಾಗಿ ನೇರ ಬ್ಯಾಟಿಂಗ್ ಬೀಸಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಡೆ ಹಾಗೂ ಪಕ್ಷದ ಆಂತರಿಕ ವಿಚಾರಗಳ ಕುರಿತು ಮಹತ್ವದ ಹೇಳಿಕೆಗಳನ್ನು ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಬೇರೆ ನಾಯಕರಂತೆ ರಾಜಿಯಾಗಿದ್ದರೆ ಡಿಕೆಶಿ ಕಥೆಯೇ ಬೇರೆಯಿರುತ್ತಿತ್ತು
ತಮ್ಮ ನಾಯಕನ ನಿಷ್ಠೆಯನ್ನು ಬಲವಾಗಿ ಸಮರ್ಥಿಸಿಕೊಂಡ ಬಾಲಕೃಷ್ಣ, ಡಿ.ಕೆ. ಶಿವಕುಮಾರ್ ಅವರು ರಾಜಕೀಯದಲ್ಲಿ ಕಷ್ಟದ ದಿನಗಳನ್ನು ಎದುರಿಸಿದರೂ ಸಿದ್ಧಾಂತದ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. ಬೇರೆ ಎಷ್ಟೋ ನಾಯಕರು ಅಧಿಕಾರಕ್ಕಾಗಿ ಅಥವಾ ಇತರೆ ಕಾರಣಗಳಿಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ಉದಾಹರಣೆಗಳಿವೆ. ಆದರೆ, ಡಿಕೆ ಶಿವಕುಮಾರ್ ಅವರು ಬೇರೆ ನಾಯಕರ ರೀತಿ ಬಿಜೆಪಿ ಜೊತೆ ರಾಜೀ ಮಾಡಿಕೊಂಡಿದ್ದರೆ, ಇಷ್ಟೊತ್ತಿಗೆ ಅವರು ಎಲ್ಲಿದ್ದರೋ, ಯಾವ ಸ್ಥಾನದಲ್ಲಿ ಇರುತ್ತಿದ್ದರೋ ಗೊತ್ತಿಲ್ಲ. ಅವರು ಯಾವುದಕ್ಕೂ ಜಗ್ಗದೆ, ಕುಗ್ಗದೆ, ಯಾವುದೇ ಆಮಿಷಗಳಿಗೆ ಒಳಗಾಗದೆ ಕೇವಲ ಪಕ್ಷಕ್ಕೋಸ್ಕರ ಎಲ್ಲವನ್ನೂ ಸಹಿಸಿಕೊಂಡು ಕಾಂಗ್ರೆಸ್ ನಲ್ಲೇ ಗಟ್ಟಿಯಾಗಿ ನಿಂತಿದ್ದಾರೆ ಎಂದು ಬಾಲಕೃಷ್ಣ ಪ್ರತಿಪಾದಿಸಿದ್ದಾರೆ.
ಪಕ್ಷಕ್ಕಾಗಿ ಜೈಲುವಾಸ ಮತ್ತು ತ್ಯಾಗ
ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕಾಗಿ ಪಟ್ಟಿರುವ ಕಷ್ಟಗಳನ್ನು ಸ್ಮರಿಸಿದ ಶಾಸಕರು, ಡಿಕೆಶಿ ಕೇವಲ ಅಧಿಕಾರ ಅನುಭವಿಸಲು ಬಂದವರಲ್ಲ. ಪಕ್ಷ ಸಂಕಷ್ಟದಲ್ಲಿದ್ದಾಗ ಟ್ರಬಲ್ ಶೂಟರ್ ಆಗಿ ಕೆಲಸ ಮಾಡಿದ್ದಾರೆ. ಪಕ್ಷಕ್ಕೋಸ್ಕರವೇ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ತ್ಯಾಗ ಮತ್ತು ಬದ್ಧತೆಯನ್ನು ಹೈಕಮಾಂಡ್ ಕಡೆಗಣಿಸಬಾರದು ಎಂಬ ಸೂಚ್ಯವಾಗಿ ಎಚ್ಚರಿಕೆ ನೀಡುವ ದಾಟಿಯಲ್ಲಿ ಮಾತನಾಡಿದ್ದಾರೆ. ಹಿಂದೆ ಅವರು ಪಕ್ಷೇತರವಾಗಿ ಗೆದ್ದಾಗಲೂ ಜನತಾದಳ ಸರ್ಕಾರ ರಚನೆಗೆ ಅವಕಾಶವಿತ್ತು. ಆದರೂ ಅವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಪಕ್ಷದಲ್ಲೇ ಉಳಿದುಕೊಂಡರು. ಇಂತಹ ನಿಷ್ಠಾವಂತ ನಾಯಕರಿಗೆ ಅವಕಾಶ ಸಿಗಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸ್ಥಾನ ನೀಡುವಂತೆ ಹೈಕಮಾಂಡ್ ಗೆ ನೇರ ಮನವಿ
ನಾಯಕತ್ವ ಬದಲಾವಣೆ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಬಾಲಕೃಷ್ಣ, ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಲೇಬೇಕು ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ. ಡಿಕೆಶಿ ಸಿಎಂ ಆದರೆ ನಮ್ಮ ರಾಮನಗರ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗುತ್ತದೆ ಎನ್ನುವ ಸಣ್ಣ ಸ್ವಾರ್ಥವೂ ನಮಗಿದೆ. ನಮ್ಮ ಜಿಲ್ಲೆಯ ನಾಯಕ ರಾಜ್ಯದ ಚುಕ್ಕಾಣಿ ಹಿಡಿದರೆ ಅದು ಇಡೀ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯ. ಆದ್ದರಿಂದ ಹೈಕಮಾಂಡ್ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪರಮೇಶ್ವರ್-ಕುಮಾರಸ್ವಾಮಿ ಭೇಟಿ: ಗೊಂದಲಕ್ಕೆ ತೆರೆ ಎಳೆದ ಶಾಸಕ
ಇದೇ ವೇಳೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹಠಾತ್ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಸಾರ್ವಜನಿಕ ಜೀವನದಲ್ಲಿರುವವರು ಪರಸ್ಪರ ಭೇಟಿಯಾಗುವುದು ಸಹಜ. ಅವರು ಯಾವ ವಿಚಾರಕ್ಕೆ ಭೇಟಿಯಾಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಯಾರೋ ಒಬ್ಬರ ಮನೆಗೆ ಹೋಗಿ ರಹಸ್ಯವಾಗಿ ಭೇಟಿಯಾದರೆ ಅದಕ್ಕೊಂದು ವಿಶೇಷ ರಾಜಕೀಯ ಅರ್ಥವಿರುತ್ತದೆ. ಕಚೇರಿಯಲ್ಲೋ, ರಸ್ತೆಯಲ್ಲೋ ಅಥವಾ ಮದುವೆ ಸಮಾರಂಭಗಳಲ್ಲಿ ಸಿಕ್ಕಾಗ ಮಾತನಾಡುವುದರಲ್ಲಿ ಯಾವುದೇ ವಿಶೇಷವಿಲ್ಲ. ಅದಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಒಟ್ಟಾರೆಯಾಗಿ, ಬಾಲಕೃಷ್ಣ ಅವರ ಈ ಹೇಳಿಕೆಯು ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವದ ಚರ್ಚೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ.







