ಕರ್ನಾಟಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಹಾಗೂ ನಾಯಕತ್ವದ ವಿಚಾರವಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟಗಳ ನಡುವೆಯೇ, ಇದೀಗ ನಾಯಕರ ನಡುವಿನ ಬಹಿರಂಗ ಕಚ್ಚಾಟ ತಾರಕಕ್ಕೇರಿದೆ. ಸಚಿವರು ಮತ್ತು ಶಾಸಕರ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಎಂದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರವಾಗಿ ಸಚಿವದ್ವಯರಾದ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಜಮೀರ್ ಅಹಮದ್ ಖಾನ್ ನಡುವೆ ಭುಗಿಲೆದ್ದಿರುವ ತೀವ್ರ ವಾಕ್ಸಮರ.
ಹಿರಿಯ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರ ಇದೀಗ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ತಮ್ಮ ತಂದೆಯ ಕ್ಷೇತ್ರವನ್ನು ತಮ್ಮ ಕುಟುಂಬದ ಸದಸ್ಯರ ಅಥವಾ ಆಪ್ತರ ಕೈಯಲ್ಲೇ ಉಳಿಸಿಕೊಳ್ಳಬೇಕು, ಆ ಮೂಲಕ ಜಿಲ್ಲೆಯ ಮೇಲಿನ ತಮ್ಮ ಹಿಡಿತವನ್ನು ಮುಂದುವರಿಸಬೇಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ದೃಢ ನಿರ್ಧಾರವಾಗಿದೆ.
ಆದರೆ, ವಂಶಪಾರಂಪರ್ಯ ರಾಜಕಾರಣಕ್ಕೆ ಬ್ರೇಕ್ ಹಾಕಿ ಪಕ್ಷನಿಷ್ಠ ಹೊಸ ಮುಖಗಳಿಗೆ ಮಣೆ ಹಾಕಬೇಕು ಎಂಬ ವಾದ ಕಾಂಗ್ರೆಸ್ ಒಳಗೆ ತೀವ್ರವಾಗಿ ಕೇಳಿಬರುತ್ತಿದೆ. ಇದರ ಲಾಭ ಪಡೆಯಲು ಮುಂದಾಗಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್, ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲೇಬೇಕು ಎಂದು ಹೈಕಮಾಂಡ್ ಮಟ್ಟದಲ್ಲಿ ಬಿರುಸಿನ ಲಾಬಿ ಆರಂಭಿಸಿದ್ದಾರೆ. ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿದ್ದರೂ, ತಮ್ಮ ವ್ಯಾಪ್ತಿ ಮೀರಿ ದಾವಣಗೆರೆಗೆ ಪದೇ ಪದೇ ಭೇಟಿ ನೀಡುತ್ತಿರುವ ಜಮೀರ್ ನಡೆ ಶಾಮನೂರು ಕುಟುಂಬದ ಕೆಂಗಣ್ಣಿಗೆ ಗುರಿಯಾಗಿದೆ.
ಜಮೀರ್ ಅವರ ಈ ಹಸ್ತಕ್ಷೇಪವನ್ನು ನೇರವಾಗಿ ಖಂಡಿಸಿರುವ ಎಸ್.ಎಸ್. ಮಲ್ಲಿಕಾರ್ಜುನ್, ಎಲ್ಲಿಂದಲೋ ಬಂದ ಜಮೀರ್ ಅವರಿಗೆ ದಾವಣಗೆರೆ ಬಗ್ಗೆ ಮಾತನಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸುವ ಮೂಲಕ ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ದಾವಣಗೆರೆಯ ರಾಜಕೀಯ ಅಖಾಡದಲ್ಲಿ ಶಾಮನೂರು ಕುಟುಂಬವನ್ನು ಮೀರಿ ಬೇರೆ ಲೆಕ್ಕಾಚಾರಗಳು ನಡೆಯುವುದು ಕಷ್ಟಸಾಧ್ಯ. ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಅವರು ಬಿಜೆಪಿಯೊಂದಿಗೂ ಆಂತರಿಕ ಹೊಂದಾಣಿಕೆ ಮಾಡಿಕೊಳ್ಳಬಲ್ಲರು ಎಂಬ ಲೆಕ್ಕಾಚಾರಗಳು ಸ್ಥಳೀಯ ಮಟ್ಟದಲ್ಲಿವೆ. ಹೀಗಾಗಿ ಈ ಟಿಕೆಟ್ ಹಂಚಿಕೆ ರಾಜ್ಯ ನಾಯಕರಿಗೆ ಹಾಗೂ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ಆಂತರಿಕ ಭಿನ್ನಮತ ಕೇವಲ ದಾವಣಗೆರೆಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಇಡೀ ರಾಜ್ಯಕ್ಕೆ ವ್ಯಾಪಿಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಬೆಳಗಾವಿ ವಿಭಜನೆ ಹಾಗೂ ಚಿಕ್ಕೋಡಿ-ಹುಕ್ಕೇರಿ ಪ್ರತ್ಯೇಕ ಜಿಲ್ಲೆಗಳ ರಚನೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ, ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಬೆಂಬಲಿಗರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಅದೇ ರೀತಿ, ಹುಬ್ಬಳ್ಳಿ-ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಮತ್ತು ವಿಧಾನ ಪರಿಷತ್ ಸದಸ್ಯ ಜಕ್ಕಪ್ಪನವರ ನಡುವೆ, ಉತ್ತರ ಕನ್ನಡದಲ್ಲಿ ಸಚಿವ ಮಂಕಾಳ ವೈದ್ಯ ಮತ್ತು ಶಾಸಕ ಸತೀಶ್ ಸೈಲ್ ನಡುವೆ ಸರ್ಕಾರಿ ಸಭೆಗಳಲ್ಲೇ ತೀವ್ರ ವಾಕ್ಸಮರಗಳು ನಡೆದಿವೆ. ಕೋಲಾರ, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲೂ ನಾಯಕರ ಗುಂಪುಗಾರಿಕೆ ಹಾಗೂ ಸಂಘರ್ಷಮಯ ವಾತಾವರಣ ಮಿತಿಮೀರಿದೆ.
ಒಂದೆಡೆ ರಾಜ್ಯ ನಾಯಕತ್ವದ ಬದಲಾವಣೆ ಎಂಬ ಊಹಾಪೋಹಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದರೆ, ಮತ್ತೊಂದೆಡೆ ತಳಮಟ್ಟದಲ್ಲಿ ಸಚಿವರು ಹಾಗೂ ಶಾಸಕರ ನಡುವಿನ ಈ ಮಟ್ಟದ ಶೀತಲ ಸಮರಗಳು ಕಾರ್ಯಕರ್ತರ ನೈತಿಕತೆಯನ್ನು ಕುಗ್ಗಿಸುತ್ತಿವೆ. ಮುಂಬರುವ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹೊಸ್ತಿಲಲ್ಲಿ ಆಡಳಿತಾರೂಢ ಪಕ್ಷದಲ್ಲಿನ ಈ ಗೊಂದಲಗಳು ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರವನ್ನು ಒದಗಿಸಿಕೊಟ್ಟಿವೆ. ಹೈಕಮಾಂಡ್ ತಕ್ಷಣವೇ ಮಧ್ಯಪ್ರವೇಶಿಸಿ, ನಾಯಕರ ನಡುವಿನ ಸಮನ್ವಯ ಕೊರತೆಯನ್ನು ನೀಗಿಸದಿದ್ದರೆ, ಮುಂಬರುವ ಚುನಾವಣೆಗಳಲ್ಲಿ ಪಕ್ಷ ಸಂಘಟನೆಯ ಮೇಲೆ ಭಾರೀ ಪೆಟ್ಟು ಬೀಳುವ ಆತಂಕವನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸುತ್ತಿದ್ದಾರೆ.







