ಬೆಂಗಳೂರು: ರಾಜ್ಯದ ಖಜಾನೆಯನ್ನು ಖಾಲಿ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ನಯಾಪೈಸೆ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರ, ಇದೀಗ ಕೇಂದ್ರ ಸರ್ಕಾರ ನೀಡಿದ ಅನುದಾನವನ್ನೂ ಸಕಾಲಕ್ಕೆ ಬಳಸಿಕೊಳ್ಳಲಾಗದೆ ವಾಪಸ್ ಕಳುಹಿಸುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಟೀಕಿಸಿರುವ ಅವರು, ಕೇಂದ್ರದ ನೆರವನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ.
ದೇವರು ಕೊಟ್ಟರೂ ಪೂಜಾರಿ ಬಿಡದ ಸ್ಥಿತಿ
ರಾಜ್ಯ ಸರ್ಕಾರದ ಈಗಿನ ಸ್ಥಿತಿ ಹೇಗಿದೆ ಎಂದರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಿದೆ. ಒಂದೆಡೆ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಭಿವೃದ್ಧಿ ಕೆಲಸಗಳಿಗೆ ಹಣ ನೀಡಲು ಯೋಗ್ಯತೆ ಇಲ್ಲದಂತಾಗಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗಾಗಿ ನೀಡುತ್ತಿರುವ ಹಣವನ್ನೂ ಬಳಸಿಕೊಳ್ಳಲಾಗದ ದೌರ್ಭಾಗ್ಯದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
ಸಿಟೀಸ್ 2.0 ಯೋಜನೆಯ ವೈಫಲ್ಯ
ನಗರಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಸಿಟೀಸ್ 2.0 ಯೋಜನೆಯಡಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ ರಾಜ್ಯ ಸರ್ಕಾರ ಮೊದಲ ಕಂತಿನ ಹಣವನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಪರಿಣಾಮವಾಗಿ, ಈಗ ಆ ಹಣವನ್ನು ಕೇಂದ್ರಕ್ಕೆ ವಾಪಸ್ ನೀಡಬೇಕಾದ ಹೀನಾಯ ಪರಿಸ್ಥಿತಿ ಬಂದೊದಗಿದೆ. ಇದು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ, ಬದಲಾಗಿ ರಾಜ್ಯದ ಜನತೆಗೆ ಮಾಡುತ್ತಿರುವ ಮಹಾ ದ್ರೋಹ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿನ್ನರ್ ಮೀಟಿಂಗ್ ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಿ
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಆರ್. ಅಶೋಕ್, ಕೇವಲ ಡಿನ್ನರ್ ಮೀಟಿಂಗ್ ಗಳು, ಔತಣಕೂಟಗಳು ಹಾಗೂ ರಾಜಕೀಯ ಮೇಲಾಟಗಳಲ್ಲೇ ಕಾಲ ಕಳೆಯುವುದನ್ನು ಬಿಟ್ಟು ಆಡಳಿತದ ಕಡೆ ಗಮನ ಕೊಡಿ ಎಂದು ತಾಕೀತು ಮಾಡಿದ್ದಾರೆ. ಕೇಂದ್ರದ ಅನುದಾನವನ್ನು ಬಳಸಿಕೊಳ್ಳಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಆಗ್ರಹಿಸಿದ್ದಾರೆ.
ನಿಮ್ಮ ನಿಷ್ಕ್ರಿಯತೆಯಿಂದಾಗಿ ರಾಜ್ಯದ ಅಭಿವೃದ್ಧಿ ಹಳಿ ತಪ್ಪುತ್ತಿದೆ. ಈ ಭ್ರಷ್ಟ ಮತ್ತು ಅದಕ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವವರೆಗೂ ಕರ್ನಾಟಕದ ಪ್ರಗತಿ ಸಾಧ್ಯವೇ ಇಲ್ಲ ಎನ್ನುವುದು ಮಾತ್ರ ಗ್ಯಾರಂಟಿ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.







