ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡಿ, ಡೆಲಿವರಿ ಬಾಯ್ ಬರುವವರೆಗೆ ಕಾಯುವ ದಿನಗಳಿಗೆ ಇನ್ನೇನು ಕಾಲ ಕೂಡಿದೆ. ದೇಶದ ಇಂಧನ ಕ್ಷೇತ್ರದ ದೈತ್ಯ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಎಲ್ಪಿಜಿ ವಿತರಣಾ ವ್ಯವಸ್ಥೆಯಲ್ಲಿ ಐತಿಹಾಸಿಕ ಮತ್ತು ಕ್ರಾಂತಿಕಾರಿ ಬದಲಾವಣೆಯೊಂದನ್ನು ತಂದಿದೆ. ಬ್ಯಾಂಕ್ ಎಟಿಎಂಗಳಿಂದ ಹಣ ಡ್ರಾ ಮಾಡುವಷ್ಟೇ ಸುಲಭವಾಗಿ, ಇನ್ಮುಂದೆ ಗ್ಯಾಸ್ ಎಟಿಎಂಗಳಿಂದ ಅಡುಗೆ ಅನಿಲ ಸಿಲಿಂಡರ್ ಪಡೆಯುವ ನೂತನ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
ಗ್ರಾಹಕರ ಸಮಯ ಉಳಿತಾಯ ಮತ್ತು ತುರ್ತು ಸಂದರ್ಭಗಳಲ್ಲಿ ಅಡುಗೆ ಅನಿಲದ ಲಭ್ಯತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಬಿಪಿಸಿಎಲ್ ದೇಶದ ಮೊಟ್ಟಮೊದಲ ಎಲ್ಪಿಜಿ ಗ್ಯಾಸ್ ಎಟಿಎಂ (LPG Gas ATM) ಅನ್ನು ಲೋಕಾರ್ಪಣೆ ಮಾಡಿದೆ. ಈ ಸ್ಮಾರ್ಟ್ ಮಿಷನ್ ಮೂಲಕ ಗ್ರಾಹಕರು ದಿನದ 24 ಗಂಟೆಯೂ ತಮಗೆ ಬೇಕಾದ ಸಮಯದಲ್ಲಿ ಕೇವಲ 2 ನಿಮಿಷಗಳಲ್ಲಿ ತುಂಬಿದ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ.
ಎಲ್ಲೆಲ್ಲಿ ಆರಂಭವಾಗಿದೆ ಮತ್ತು ಇದು ಹೇಗೆ ಕೆಲಸ ಮಾಡುತ್ತದೆ?
ಪ್ರಾಯೋಗಿಕ ಯೋಜನೆಯಾಗಿ (Pilot Project) ಹರಿಯಾಣದ ಗುರುಗ್ರಾಮದ ಸೋಹ್ರಾ ಪ್ರದೇಶದ ಸೆಕ್ಟರ್ 22ರಲ್ಲಿ ಈ ಅತ್ಯಾಧುನಿಕ ಗ್ಯಾಸ್ ಎಟಿಎಂ ಅನ್ನು ಸ್ಥಾಪಿಸಲಾಗಿದೆ. ಇಲ್ಲಿನ ಯಶಸ್ಸಿನ ಬಳಿಕ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಿಗೆ ಈ ಸೇವೆಯನ್ನು ವಿಸ್ತರಿಸಲು ಕಂಪನಿ ನಿರ್ಧರಿಸಿದೆ.
ಸಿಲಿಂಡರ್ ಪಡೆಯುವ ವಿಧಾನ ಅತ್ಯಂತ ಸರಳ
ಈ ಎಟಿಎಂ ಸಂಪೂರ್ಣವಾಗಿ ಸ್ವಯಂಚಾಲಿತವಾಗಿದ್ದು, ಯಾವುದೇ ಸಿಬ್ಬಂದಿಯ ಸಹಾಯವಿಲ್ಲದೆ ಗ್ರಾಹಕರು ಸಿಲಿಂಡರ್ ಬದಲಾಯಿಸಿಕೊಳ್ಳಬಹುದು.
ಲಾಗಿನ್ ಪ್ರಕ್ರಿಯೆ: ಎಟಿಎಂ ಮಿಷನ್ ಮುಂದೆ ನಿಂತು ಟಚ್ ಸ್ಕ್ರೀನ್ ಮೇಲೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ಒಟಿಪಿ ದೃಢೀಕರಣ: ತಕ್ಷಣವೇ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಅನ್ನು ಮಿಷನ್ನಲ್ಲಿ ನಮೂದಿಸಿ ಖಚಿತಪಡಿಸಬೇಕು.
ಹಣ ಪಾವತಿ: ನಂತರ ಸ್ಕ್ರೀನ್ ಮೇಲೆ ಕಾಣಿಸುವ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಯುಪಿಐ (UPI) ಮೂಲಕ ಹಣ ಪಾವತಿಸಬೇಕು.
ಸಿಲಿಂಡರ್ ವಿನಿಮಯ: ಪಾವತಿ ಯಶಸ್ವಿಯಾದ ಕೂಡಲೇ ಎಟಿಎಂ ಬಾಗಿಲು ತೆರೆಯುತ್ತದೆ. ನಿಮ್ಮಲ್ಲಿರುವ ಖಾಲಿ ಸಿಲಿಂಡರ್ ಅನ್ನು ಅಲ್ಲಿ ಇರಿಸಬೇಕು. ತೂಕ ಮತ್ತು ಸುರಕ್ಷತೆಯನ್ನು ಮಿಷನ್ ಪರಿಶೀಲಿಸಿದ ನಂತರ, ಕೇವಲ 2 ರಿಂದ 3 ನಿಮಿಷಗಳಲ್ಲಿ ತುಂಬಿದ ಹೊಸ ಸಿಲಿಂಡರ್ ನಿಮಗೆ ಲಭ್ಯವಾಗುತ್ತದೆ.
ಕಂಪೋಸಿಟ್ ಸಿಲಿಂಡರ್ ವಿಶೇಷತೆಗಳು
ಈ ಎಟಿಎಂಗಳಲ್ಲಿ ಲಭ್ಯವಿರುವ ಸಿಲಿಂಡರ್ಗಳು ಹಳೆಯ ಭಾರವಾದ ಕಬ್ಬಿಣದ ಸಿಲಿಂಡರ್ಗಳಲ್ಲ. ಬದಲಾಗಿ ಇವು ಅತ್ಯಾಧುನಿಕ ಕಂಪೋಸಿಟ್ ಸಿಲಿಂಡರ್ಗಳಾಗಿವೆ.
ಹಗುರ ತೂಕ: ಫೈಬರ್ನಿಂದ ತಯಾರಿಸಲಾದ ಈ ಸಿಲಿಂಡರ್ಗಳು ಕೇವಲ 15 ಕೆಜಿ ತೂಕವಿದ್ದು, ಮಹಿಳೆಯರು ಮತ್ತು ವೃದ್ಧರು ಕೂಡ ಸುಲಭವಾಗಿ ಎತ್ತಿಕೊಂಡು ಹೋಗಬಹುದು.
ಪಾರದರ್ಶಕ ವಿನ್ಯಾಸ: ಈ ಸಿಲಿಂಡರ್ಗಳ ಪ್ರಮುಖ ವಿಶೇಷತೆಯೆಂದರೆ ಪಾರದರ್ಶಕತೆ. ಸಿಲಿಂಡರ್ನಲ್ಲಿ ಎಷ್ಟು ಗ್ಯಾಸ್ ಬಾಕಿ ಇದೆ ಎಂಬುದನ್ನು ಹೊರಗಿನಿಂದಲೇ ನೋಡಬಹುದು. ಇದರಿಂದ ಗ್ಯಾಸ್ ಕಳ್ಳತನ ಅಥವಾ ಕಡಿಮೆ ಗ್ಯಾಸ್ ಪೂರೈಕೆಯ ಅನುಮಾನಗಳಿಗೆ ತೆರೆ ಎಳೆದಂತಾಗುತ್ತದೆ.
ತುಕ್ಕು ರಹಿತ ಮತ್ತು ಸುರಕ್ಷಿತ: ಫೈಬರ್ ಬಾಡಿ ಆಗಿರುವುದರಿಂದ ಇವು ತುಕ್ಕು ಹಿಡಿಯುವುದಿಲ್ಲ ಮತ್ತು ಸ್ಫೋಟಗೊಳ್ಳುವ ಸಾಧ್ಯತೆಗಳಿಲ್ಲದ ಕಾರಣ ಹೆಚ್ಚು ಸುರಕ್ಷಿತವಾಗಿವೆ.
ಗ್ರಾಹಕರಿಗೆ ಆಗುವ ಪ್ರಮುಖ ಲಾಭಗಳು
ದಿನದ 24 ಗಂಟೆಯೂ ಸೇವೆ ಲಭ್ಯವಿರುವುದರಿಂದ ಆಫೀಸ್ ಕೆಲಸ ಮುಗಿಸಿ ಬರುವಾಗ ಅಥವಾ ರಾತ್ರಿ ವೇಳೆ ಗ್ಯಾಸ್ ಖಾಲಿಯಾದರೆ ಚಿಂತಿಸುವ ಅಗತ್ಯವಿಲ್ಲ. ಏಜೆನ್ಸಿಯ ಸಮಯಕ್ಕೆ ಹೊಂದಿಕೊಳ್ಳುವ ಬದಲು, ನಿಮ್ಮ ಬಿಡುವಿನ ವೇಳೆಯಲ್ಲಿ ಸಿಲಿಂಡರ್ ಪಡೆಯಬಹುದು. ಎಟಿಎಂನಲ್ಲಿ ಸಿಲಿಂಡರ್ ಸ್ಟಾಕ್ ಕಡಿಮೆ ಆದಾಗ, ಸ್ವಯಂಚಾಲಿತವಾಗಿ ಏಜೆನ್ಸಿಗೆ ಸಂದೇಶ ರವಾನೆಯಾಗಿ ಮರುಭರ್ತಿ ಮಾಡಲಾಗುತ್ತದೆ.
ಈ ಯೋಜನೆಯು ನಗರ ಪ್ರದೇಶದ ಜನಜೀವನಕ್ಕೆ ವರದಾನವಾಗಲಿದ್ದು, ಶೀಘ್ರದಲ್ಲೇ ನಿಮ್ಮ ನಗರಕ್ಕೂ ಈ ಸ್ಮಾರ್ಟ್ ಸೇವೆ ಕಾಲಿಡಲಿದೆ.







