ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ನೀಡಲು ಹಾಗೂ ಕಳೆದುಕೊಂಡಿರುವ ತನ್ನ ಗ್ರಾಹಕರನ್ನು ಮರಳಿ ಸೆಳೆಯಲು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬೃಹತ್ ರಣತಂತ್ರವೊಂದನ್ನು ಹೆಣೆದಿದೆ. ನೆಟ್‌ವರ್ಕ್ ಸಮಸ್ಯೆ ಹಾಗೂ ಬಂಡವಾಳದ ಕೊರತೆಯಿಂದ ಬಳಲುತ್ತಿರುವ ಪ್ರಮುಖ ಖಾಸಗಿ ಟೆಲಿಕಾಂ ಸಂಸ್ಥೆ ವೊಡಾಫೋನ್ ಐಡಿಯಾ ಜೊತೆ ಕೈಜೋಡಿಸಲು ಬಿಎಸ್‌ಎನ್‌ಎಲ್ ಮುಂದಾಗಿದ್ದು, ಇದು ಭಾರತೀಯ ದೂರಸಂಪರ್ಕ ಇತಿಹಾಸದಲ್ಲಿ ಬಹುದೊಡ್ಡ ಬದಲಾವಣೆಗೆ ನಾಂದಿ ಹಾಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಹೇಗಿರಲಿದೆ ಈ ಮೆಗಾ ಪ್ಲಾನ್
ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಎರಡೂ ಸಂಸ್ಥೆಗಳು ಸದ್ಯ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿವೆ. ಈ ಸವಾಲನ್ನು ಒಟ್ಟಾಗಿ ಮೆಟ್ಟಿನಿಂತು ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಎರಡೂ ಕಂಪನಿಗಳು ತಮ್ಮ ಟವರ್‌ಗಳು, ಆಪ್ಟಿಕಲ್ ಫೈಬರ್ ಜಾಲ ಹಾಗೂ ಸ್ಪೆಕ್ಟ್ರಮ್‌ಗಳನ್ನು ಪರಸ್ಪರ ಹಂಚಿಕೊಳ್ಳಲು ಗಂಭೀರ ಮಾತುಕತೆ ಆರಂಭಿಸಿವೆ. ಇದರಿಂದಾಗಿ ಹೊಸದಾಗಿ ಟವರ್ ನಿರ್ಮಿಸುವ ಅಥವಾ ಕೇಬಲ್ ಎಳೆಯುವ ಕೋಟ್ಯಂತರ ರೂಪಾಯಿ ವೆಚ್ಚ ಉಳಿಯಲಿದೆ. ಈ ಸಮನ್ವಯತೆಯಿಂದಾಗಿ ಗ್ರಾಹಕರಿಗೆ ಒಂದೇ ವ್ಯವಸ್ಥೆಯಡಿ ಎರಡು ಪ್ರಬಲ ನೆಟ್‌ವರ್ಕ್ ಸೇವೆಗಳು ಲಭ್ಯವಾಗಲಿದ್ದು, ಕುಗ್ರಾಮಗಳಿಗೂ ಅತ್ಯುತ್ತಮ ನೆಟ್‌ವರ್ಕ್ ತಲುಪಿಸುವ ಉದ್ದೇಶವನ್ನು ಹೊಂದಲಾಗಿದೆ.
ಈ ಮಹತ್ವದ ಹೆಜ್ಜೆಗೆ ಕಾರಣವೇನು
ಇತ್ತೀಚೆಗೆ ಖಾಸಗಿ ಟೆಲಿಕಾಂಗಳು ರೀಚಾರ್ಜ್ ದರ ಹೆಚ್ಚಿಸಿದಾಗ ಲಕ್ಷಾಂತರ ಗ್ರಾಹಕರು ಬಿಎಸ್‌ಎನ್‌ಎಲ್ ಕಡೆ ಮುಖ ಮಾಡಿದ್ದರು. ಆದರೆ ಬಿಎಸ್‌ಎನ್‌ಎಲ್ ತನ್ನ ವ್ಯವಸ್ಥೆಯನ್ನು ತ್ರೀಜಿಯಿಂದ ಫೋರ್ ಜಿಗೆ ಬದಲಾಯಿಸುವ ಪ್ರಕ್ರಿಯೆಯಲ್ಲಿ ಉಂಟಾದ ತಾಂತ್ರಿಕ ಅಡಚಣೆಗಳಿಂದಾಗಿ ಗ್ರಾಹಕರು ನೆಟ್‌ವರ್ಕ್ ಸಿಗದೆ ಪರದಾಡುವಂತಾಯಿತು. ಕರೆ ಕಡಿತ ಹಾಗೂ ಇಂಟರ್ನೆಟ್ ವೇಗದ ಕೊರತೆಯಿಂದ ಬೇಸತ್ತ ಅನೇಕರು ಮತ್ತೆ ಖಾಸಗಿ ನೆಟ್‌ವರ್ಕ್‌ಗಳತ್ತ ಮರಳಲಾರಂಭಿಸಿದರು. ಈ ಸೋರಿಕೆಯನ್ನು ತಡೆಗಟ್ಟಲು ಮತ್ತು ಜಿಯೋ, ಏರ್‌ಟೆಲ್‌ನಂತಹ ಬಲಿಷ್ಠ ಸಂಸ್ಥೆಗಳ ಆರ್ಥಿಕ ಶಕ್ತಿಯ ಮುಂದೆ ಗಟ್ಟಿಯಾಗಿ ನಿಲ್ಲಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾಗೆ ಮೂಲಸೌಕರ್ಯಗಳ ಹಂಚಿಕೆ ಅನಿವಾರ್ಯವಾಗಿದೆ.
ಈ ಮಹತ್ವದ ಬೆಳವಣಿಗೆಯನ್ನು ಕೇಂದ್ರ ದೂರಸಂಪರ್ಕ ಇಲಾಖೆ ಕೂಡ ದೃಢಪಡಿಸಿದೆ. ಇಲಾಖೆಯ ಕಾರ್ಯದರ್ಶಿ ಅಮಿತ್ ಅಗರ್‌ವಾಲ್ ಅವರು ಇತ್ತೀಚೆಗೆ ಸಂಸದೀಯ ಸಮಿತಿಗೆ ಈ ಬಗ್ಗೆ ವಿಸ್ತೃತ ಮಾಹಿತಿ ನೀಡಿದ್ದಾರೆ. ಎರಡೂ ಆಪರೇಟರ್‌ಗಳು ಬಂಡವಾಳದ ಕೊರತೆ ಮತ್ತು ಅಸಮಾನ ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಮೂಲಸೌಕರ್ಯ ಹಂಚಿಕೆ ಒಪ್ಪಂದವು ಉಭಯ ಸಂಸ್ಥೆಗಳಿಗೆ ಸಂಜೀವಿನಿಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ವರ್ಷದೊಳಗೆ ಈ ಒಪ್ಪಂದದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಆದರೆ ಇದು ಕೇವಲ ವಾಣಿಜ್ಯ ಮತ್ತು ವ್ಯಾಪಾರ ದೃಷ್ಟಿಕೋನದ ಒಪ್ಪಂದವಾಗಿರಲಿದೆ ವಿನಃ ಎರಡು ಕಂಪನಿಗಳ ವಿಲೀನವಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಈ ಮೈತ್ರಿಯ ಅತಿ ದೊಡ್ಡ ಲಾಭ ಫೈವ್ ಜಿ ಸೇವೆಯ ತ್ವರಿತ ಜಾರಿಯಾಗಿದೆ. ಬಿಎಸ್‌ಎನ್‌ಎಲ್ ಅಧ್ಯಕ್ಷ ಎ ರಾಬರ್ಟ್ ಜೆ ರವಿ ಅವರು ಇತ್ತೀಚಿನ ಟೆಲಿಕಾಂ ಸಮಾರಂಭವೊಂದರಲ್ಲಿ ಮಾತನಾಡಿ, ನೆಟ್‌ವರ್ಕ್ ವಿಸ್ತರಣೆಗೆ ಭಾರೀ ಹೂಡಿಕೆ ಮಾಡಿದ್ದರೂ ಆಪರೇಟರ್‌ಗಳಿಗೆ ನಿರೀಕ್ಷಿತ ಲಾಭ ಸಿಕ್ಕಿಲ್ಲ. ಹೀಗಾಗಿ ಭವಿಷ್ಯದಲ್ಲಿ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಗುಣಮಟ್ಟದ ಸೇವೆ ನೀಡಲು ಮೂಲಸೌಕರ್ಯ ಹಂಚಿಕೆ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು.
ಬಿಎಸ್‌ಎನ್‌ಎಲ್ ಈಗಾಗಲೇ ದೇಶಾದ್ಯಂತ ಲಕ್ಷಾಂತರ ಫೋರ್ ಜಿ ಟವರ್‌ಗಳನ್ನು ಸ್ಥಾಪಿಸಿದ್ದು, ಭವಿಷ್ಯದಲ್ಲಿ ಇವುಗಳನ್ನೇ ಸುಲಭವಾಗಿ ಫೈವ್ ಜಿಗೆ ಅಪ್‌ಗ್ರೇಡ್ ಮಾಡುವ ಗುರಿ ಹೊಂದಿದೆ. ವೊಡಾಫೋನ್ ಐಡಿಯಾ ಜೊತೆಗಿನ ಒಪ್ಪಂದ ಯಶಸ್ವಿಯಾದರೆ, ಗ್ರಾಹಕರಿಗೆ ತಡೆರಹಿತ ವೇಗದ ಇಂಟರ್ನೆಟ್ ಮತ್ತು ಕರಾರುವಕ್ಕಾದ ನೆಟ್‌ವರ್ಕ್ ಸೌಲಭ್ಯ ಒದಗಿಸುವುದು ಸುಲಭವಾಗಲಿದೆ. ಗುಣಮಟ್ಟದ ಫೈವ್ ಜಿ ಸೇವೆ ಮಾರುಕಟ್ಟೆಗೆ ಪ್ರವೇಶಿಸಿದರೆ, ಅಗ್ಗದ ಬೆಲೆಗೆ ಸೇವೆ ನೀಡುವ ಬಿಎಸ್‌ಎನ್‌ಎಲ್ ಕಡೆಗೆ ಗ್ರಾಹಕರ ದಂಡು ಹರಿದುಬರುವುದು ಖಚಿತ. ಭವಿಷ್ಯದಲ್ಲಿ ಈ ಮೆಗಾ ಪ್ಲಾನ್ ಕಾರ್ಯಗತಗೊಂಡರೆ ಭಾರತೀಯ ಟೆಲಿಕಾಂ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.







