ಬೇಸಿಗೆ ಆರಂಭಕ್ಕೂ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಶುರುವಾಗಿದೆ. ನಗರದಲ್ಲಿ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕಾವೇರಿ ನೀರಿನ ಲಭ್ಯತೆಯಲ್ಲೂ ಕೊರತೆ ಎದುರಾಗಿದೆ. ಈ ಆತಂಕಕಾರಿ ಪರಿಸ್ಥಿತಿಯನ್ನು ನಿಭಾಯಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಇದೀಗ ಮಹತ್ವದ ಹಾಗೂ ಕಠಿಣ ಹೆಜ್ಜೆಯನ್ನಿಟ್ಟಿದೆ. ಇನ್ಮುಂದೆ ನಗರದಲ್ಲಿ ಕುಡಿಯುವ ನೀರನ್ನು ಮನಬಂದಂತೆ ಪೋಲು ಮಾಡಿದರೆ ಸಾರ್ವಜನಿಕರು ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ.
ಕುಡಿಯುವ ಕಾವೇರಿ ನೀರು ಕೇವಲ ಕುಡಿಯಲು ಮತ್ತು ಮನೆಯ ದೈನಂದಿನ ಅತ್ಯಗತ್ಯ ಬಳಕೆಗೆ ಮಾತ್ರ ಸೀಮಿತವಾಗಿರಬೇಕು ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ. ಸಾಕಷ್ಟು ಜನರು ಕಾವೇರಿ ನೀರನ್ನು ಕಾರು, ಬೈಕ್ ಸೇರಿದಂತೆ ವಾಹನಗಳನ್ನು ತೊಳೆಯಲು ಯದ್ವಾತದ್ವಾ ಬಳಸುತ್ತಾರೆ. ಇನ್ನು ಮುಂದೆ ಹೀಗೆ ಮಾಡುವಂತಿಲ್ಲ. ಇದರ ಜೊತೆಗೆ ಗಿಡಗಳಿಗೆ ನೀರು ಹಾಯಿಸುವುದು, ಮನೆಯ ಮುಂದಿನ ರಸ್ತೆ ಅಥವಾ ಕಾಂಪೌಂಡ್ ಸ್ವಚ್ಛ ಮಾಡುವುದು ಹಾಗೂ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ಬಳಸುವಂತಿಲ್ಲ ಎಂದು ಸಂಪೂರ್ಣ ನಿಷೇಧ ಹೇರಲಾಗಿದೆ. ಕಾವೇರಿ ನೀರನ್ನು ದುರುಪಯೋಗ ಮಾಡುವವರ ಮೇಲೆ ಜಲಮಂಡಳಿ ಇದೀಗ ಹದ್ದಿನ ಕಣ್ಣಿಟ್ಟಿದೆ.
ಈ ಹೊಸ ನಿಯಮಗಳನ್ನು ಉಲ್ಲಂಘಿಸುವವರಿಗೆ ಜಲಮಂಡಳಿ ಆರ್ಥಿಕ ದಂಡದ ಬರೆ ಎಳೆಯಲಿದೆ. ಯಾರಾದರೂ ಮೊದಲ ಬಾರಿ ನೀರು ಪೋಲು ಮಾಡುತ್ತಾ ಸಿಕ್ಕಿಬಿದ್ದರೆ ಅವರಿಗೆ 5000 ರೂಪಾಯಿಗಳ ದಂಡ ವಿಧಿಸಲಾಗುತ್ತದೆ. ಇದೇ ತಪ್ಪನ್ನು ಮತ್ತೆ ಮಾಡಿದರೆ, ಅಂದರೆ ನಿಯಮ ಉಲ್ಲಂಘನೆ ಮರುಕಳಿಸಿದರೆ ಮೂಲ ದಂಡ 5000 ಜೊತೆಗೆ ಹೆಚ್ಚುವರಿಯಾಗಿ 500 ರೂಪಾಯಿ ಸೇರಿಸಿ ದಂಡ ಹಾಕಲಾಗುತ್ತದೆ. ಒಂದು ವೇಳೆ ಸಾರ್ವಜನಿಕರು ದಂಡ ಕಟ್ಟಲು ನಿರಾಕರಿಸಿದರೆ ಅಥವಾ ವಿಳಂಬ ಮಾಡಿದರೆ, ಆ ದಂಡದ ಮೊತ್ತವನ್ನು ನೇರವಾಗಿ ಗ್ರಾಹಕರ ಮುಂದಿನ ತಿಂಗಳ ನೀರಿನ ಬಿಲ್ಲಿನಲ್ಲೇ ಸೇರಿಸಿ ಕಳುಹಿಸಲಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.
ಈ ನಿಯಮ ಕೇವಲ ಕಾಗದದಲ್ಲಿ ಮಾತ್ರ ಇರುವುದಿಲ್ಲ, ಬದಲಾಗಿ ಅಧಿಕಾರಿಗಳು ಫೀಲ್ಡ್ ಗಿಳಿದು ಕಾರ್ಯಾಚರಣೆ ನಡೆಸಲಿದ್ದಾರೆ. ಜಲಮಂಡಳಿಯ ಅಧಿಕಾರಿಗಳ ತಂಡ ನಗರದಾದ್ಯಂತ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಿದೆ. ಈ ವೇಳೆ ಯಾರಾದರೂ ನೀರು ಪೋಲು ಮಾಡುವುದು ಕಂಡುಬಂದರೆ ಸ್ಥಳದಲ್ಲೇ ದಂಡದ ನೋಟಿಸ್ ನೀಡಲಾಗುವುದು. ದಂಡದ ಜೊತೆಗೆ, ಉದ್ದೇಶಪೂರ್ವಕವಾಗಿ ಮತ್ತು ನಿರಂತರವಾಗಿ ನೀರು ಪೋಲು ಮಾಡುವವರ ನೀರಿನ ಸಂಪರ್ಕವನ್ನೇ ಶಾಶ್ವತವಾಗಿ ಕಡಿತಗೊಳಿಸುವ ಕಠಿಣ ಎಚ್ಚರಿಕೆಯನ್ನೂ ನೀಡಲಾಗಿದೆ.
1964ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆಯ ಕಲಂ 109ರ ಅಡಿಯಲ್ಲಿ ಈ ದಂಡ ವಿಧಿಸಲು ಕಾನೂನಿನಲ್ಲಿ ಸಂಪೂರ್ಣ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಎದುರಾಗಿರುವ ಕಾವೇರಿ ನೀರಿನ ತೀವ್ರ ಕೊರತೆಯ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರ್ಥಮಾಡಿಕೊಳ್ಳಬೇಕು. ನೀರು ನಮ್ಮೆಲ್ಲರ ಜೀವನಾಡಿ, ಅದನ್ನು ಮುಂದಿನ ದಿನಗಳಿಗಾಗಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಪ್ರತಿಯೊಬ್ಬರೂ ಜಾಗರೂಕರಾಗಿ, ಅತ್ಯಂತ ಮಿತವಾಗಿ ನೀರು ಬಳಸಬೇಕು ಎಂದು ಜಲಮಂಡಳಿ ಸಾರ್ವಜನಿಕರಲ್ಲಿ ಕಳಕಳಿಯ ಎಚ್ಚರಿಕೆ ರವಾನಿಸಿದೆ.







