ರಾಜ್ಯದಲ್ಲಿ ಹಿಂದಿ ಭಾಷಾ ಪರೀಕ್ಷೆಯನ್ನು ಕಡ್ಡಾಯವಲ್ಲ ಎಂದು ಘೋಷಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸ ಭಾಷೆಯನ್ನು ಕಲಿಯುವುದು ಜ್ಞಾನದ ಸಂಕೇತವೇ ಹೊರತು ಅದು ಯಾವುದೇ ಕಾರಣಕ್ಕೂ ಹೇರಿಕೆಯಾಗುವುದಿಲ್ಲ ಎಂದು ಗುಡುಗಿರುವ ಅವರು, ವಿದ್ಯಾರ್ಥಿಗಳು ಅಥವಾ ಪೋಷಕರು ಕೇಳದೆ ಸರ್ಕಾರ ಯಾರ ಓಲೈಕೆಗಾಗಿ ಏಕಾಏಕಿ ಈ ನಿರ್ಧಾರ ಕೈಗೊಂಡಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಹೊಸ ಭಾಷೆ ಕಲಿಯುವುದರಿಂದ ಆಗುವ ಲಾಭಗಳ ಬಗ್ಗೆ ತಮ್ಮದೇ ಹಿಂದಿನ ಅನುಭವಗಳನ್ನು ಹಂಚಿಕೊಂಡ ಸಚಿವರು, ದೆಹಲಿಗೆ ಹೊಸದಾಗಿ ಹೋದ ದಿನಗಳಲ್ಲಿ ಭಾಷೆಯ ಕಾರಣದಿಂದ ತಾವು ಎದುರಿಸಿದ ಮುಜುಗರವನ್ನು ಮೆಲುಕು ಹಾಕಿದರು. ಮೊದಮೊದಲು ನಾನು ದೆಹಲಿಗೆ ಹೋದಾಗ ನನ್ನ ಭಾಷೆ ಕೇಳಿ ಅಲ್ಲಿದ್ದವರು ನಗುತ್ತಿದ್ದರು. ನೀವು ಯಾವ ಭಾಷೆ ಮಾತನಾಡುತ್ತಿದ್ದೀರಿ ಎಂದು ಅಣಕಿಸುತ್ತಿದ್ದರು. ಹಿಂದಿ ಭಾಷೆ ಕಲಿಯುವುದರಿಂದ ನಮಗೇನು ನಷ್ಟವಾಗುತ್ತದೆ ಅಥವಾ ಸಮಸ್ಯೆ ಏನು ಎಂದು ಅವರು ಪ್ರಶ್ನಿಸಿದರು.
ನಾವು ಕೂಡ ನಮ್ಮ ಶಾಲಾ ದಿನಗಳಲ್ಲಿ ತ್ರಿಭಾಷಾ ಸೂತ್ರದ ಅಡಿಯಲ್ಲೇ ವ್ಯಾಸಂಗ ಮಾಡಿದ್ದೇವೆ. ಮೂರು ಭಾಷೆಗಳನ್ನು ಕಲಿತಿದ್ದರಿಂದ ನಮಗೇನು ಅದರಿಂದ ತೊಂದರೆ ಆಗಿಲ್ಲ. ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯ ಜೊತೆಗೆ ಇತರ ಎಲ್ಲಾ ಭಾಷೆಗಳನ್ನು ಕಲಿಯಬೇಕು. ಆದರೆ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ತ್ರಿಭಾಷಾ ನೀತಿಯ ಬಗ್ಗೆ ಇಲ್ಲಸಲ್ಲದ ಗೊಂದಲಗಳನ್ನು ಸೃಷ್ಟಿಸುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರದ ನಿರ್ಧಾರದ ಸಮಯವನ್ನು ಕಟುವಾಗಿ ಟೀಕಿಸಿದ ಶೋಭಾ ಕರಂದ್ಲಾಜೆ, ವಿದ್ಯಾರ್ಥಿಗಳು ಇಡೀ ವರ್ಷ ಶ್ರದ್ಧೆಯಿಂದ ಹಿಂದಿ ಭಾಷೆಯನ್ನು ಓದಿರುತ್ತಾರೆ. ಶಿಕ್ಷಕರು ಕೂಡ ಪಾಠ ಮಾಡಿರುತ್ತಾರೆ. ಆದರೆ ಸರಿಯಾಗಿ ಪರೀಕ್ಷೆ ಬರೆಯುವ ಹೊತ್ತಿಗೆ ಸರ್ಕಾರ ಹಿಂದಿ ಪರೀಕ್ಷೆ ಕಡ್ಡಾಯವಲ್ಲ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ. ಒಂದು ವರ್ಷ ಪೂರ್ತಿ ಕಲಿತ ಮೇಲೆ ಕೊನೆ ಕ್ಷಣದಲ್ಲಿ ಪರೀಕ್ಷೆ ಬೇಡ ಎನ್ನುವುದು ಸಂಪೂರ್ಣ ಅವೈಜ್ಞಾನಿಕ ನಿರ್ಧಾರ. ನಮಗೆ ಹಿಂದಿ ಬೇಡ ಎಂದು ಶಾಲಾ ಮಕ್ಕಳು ಸರ್ಕಾರಕ್ಕೆ ಮನವಿ ಮಾಡಿದ್ದರಾ ಅಥವಾ ಮಕ್ಕಳ ಪೋಷಕರು ಬೇಡ ಎಂದು ಹೇಳಿದ್ದರಾ. ಹಾಗಾದರೆ ಯಾರ ಮಾತು ಕೇಳಿ ಹಿಂದಿ ಭಾಷೆಯನ್ನು ಪರೀಕ್ಷೆಯಿಂದ ತೆಗೆದುಹಾಕಿದ್ದೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳ ವಿರುದ್ಧ ನೇರ ವಾಗ್ದಾಳಿ ನಡೆಸಿದ ಅವರು, ರಾಜ್ಯದ ಶಿಕ್ಷಣ ಸಚಿವರಿಗೆ ಶಿಕ್ಷಣದ ಬಗ್ಗೆಯೇ ಕನಿಷ್ಠ ಅರಿವಿಲ್ಲ. ಇಂಥಹ ಅವೈಜ್ಞಾನಿಕ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ರಾಜ್ಯದ ಮುಖ್ಯಮಂತ್ರಿಗಳಿಗೆ ಏನಾಗಿತ್ತು. ಅವರು ಯಾಕೆ ಇಂತಹ ನಿರ್ಧಾರಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಭಾಷೆಯ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಕೇವಲ ಯಾರನ್ನೋ ಮೆಚ್ಚಿಸಲು ರಾಜ್ಯ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಹಿಂದಿ ಭಾಷೆಯ ಕಡ್ಡಾಯ ಪರೀಕ್ಷೆ ರದ್ದತಿ ವಿಚಾರ ಇದೀಗ ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಶೋಭಾ ಕರಂದ್ಲಾಜೆ ಅವರ ಈ ನೇರ ವಾಗ್ದಾಳಿ ರಾಜ್ಯ ಸರ್ಕಾರದ ಭಾಷಾ ನೀತಿಯನ್ನು ಪ್ರಶ್ನಿಸುವಂತೆ ಮಾಡಿದೆ.







