ಬೆಂಗಳೂರು: ಉಪ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ಮತ್ತೊಂದು ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದ ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆಯ ನೆಪದಲ್ಲಿ ಪದೇಪದೆ ಗುರಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಇದು ಈಗ ನೇರವಾಗಿ ಮುಖ್ಯಮಂತ್ರಿಗಳ ವಿರುದ್ಧವೇ ಅಸಮಾಧಾನ ಸ್ಫೋಟಗೊಳ್ಳುವಂತೆ ಮಾಡಿದೆ.
ಆಪ್ತರ ರಕ್ಷಣೆಗೆ ನಿಲ್ಲದ ಸಿಎಂ ವಿರುದ್ಧ ಆಕ್ರೋಶ
ಯಾವಾಗಲೂ ತಮ್ಮ ಬೆಂಬಲಿಗರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಿದ್ದ ಸಿದ್ದರಾಮಯ್ಯ ಅವರು, ಈ ಬಾರಿ ತಮ್ಮ ಆಪ್ತರ ವಿರುದ್ಧ ಶಿಸ್ತು ಕ್ರಮ ಜರುಗುತ್ತಿದ್ದರೂ ಮೌನಕ್ಕೆ ಶರಣಾಗಿರುವುದು ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ. ಹೈಕಮಾಂಡ್ ಮಟ್ಟದಲ್ಲಿ ಅಥವಾ ರಾಜ್ಯ ನಾಯಕತ್ವದ ಎದುರು ಸಿದ್ದರಾಮಯ್ಯ ಅವರು ಅಸಹಾಯಕರಂತೆ ವರ್ತಿಸುತ್ತಿದ್ದಾರೆ. ತಮ್ಮವರ ರಕ್ಷಣೆಗೆ ಅವರು ಯಾವುದೇ ಕಠಿಣ ನಿಲುವು ತಳೆಯುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ, ಪಕ್ಷಕ್ಕಾಗಿ ದುಡಿದವರು ದೂರವಾಗುತ್ತಾರೆ ಮತ್ತು ಇದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ದೊಡ್ಡ ಹೊಡೆತ ನೀಡಲಿದೆ ಎಂಬ ಆತಂಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿದೆ.
ಇಂತಹ ಅಸಹಾಯಕತೆ ನಿರೀಕ್ಷಿಸಿರಲಿಲ್ಲ ಎಂದ ಕೆ ಎನ್ ರಾಜಣ್ಣ
ಈ ಬೆಳವಣಿಗೆಗಳ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಸಚಿವ ಕೆ ಎನ್ ರಾಜಣ್ಣ, ಸಿದ್ದರಾಮಯ್ಯ ಅವರ ತಟಸ್ಥ ಧೋರಣೆಯನ್ನು ಪ್ರಶ್ನಿಸಿದ್ದಾರೆ. ಪಕ್ಷಕ್ಕೆ ನಿಷ್ಠೆಯಿಂದ ಇರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಬೇಸರ ತಂದಿದೆ. ಬಡವರ ಪರವಾಗಿ ಧ್ವನಿ ಎತ್ತುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸಿಎಂ ಗಟ್ಟಿಯಾಗಿ ನಿಲ್ಲಬೇಕಿತ್ತು. ಅವರು ಯಾಕೆ ಇಷ್ಟೊಂದು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೋ ನಮಗೆ ಅರ್ಥವಾಗುತ್ತಿಲ್ಲ. ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಬಹಿರಂಗವಾಗಿ ಬೇರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಹೇಳಿದಾಗ ಯಾವುದೇ ಕ್ರಮ ಆಗಿರಲಿಲ್ಲ. ಈಗ ಆಪ್ತರನ್ನು ಮಾತ್ರ ಗುರಿ ಮಾಡುತ್ತಿರುವುದು ಸರಿಯಲ್ಲ ಎಂದು ರಾಜಣ್ಣ ಕಿಡಿಕಾರಿದ್ದಾರೆ.
ಶಿಸ್ತಿನ ಚೌಕಟ್ಟು ಮೀರಿದರೆ ಕ್ರಮ ಅನಿವಾರ್ಯ ಎಂದ ಬಾಲಕೃಷ್ಣ
ಮತ್ತೊಂದೆಡೆ ಶಾಸಕ ಹೆಚ್ ಸಿ ಬಾಲಕೃಷ್ಣ ಅವರು ಪಕ್ಷದ ಶಿಸ್ತಿನ ಪರವಾಗಿ ಮಾತನಾಡಿದ್ದಾರೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಅದು ಸಿಎಂ ಇರಲಿ ಅಥವಾ ಡಿಸಿಎಂ ಇರಲಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಕ್ರಮ ಎದುರಿಸಲೇಬೇಕು. ಮುಸ್ಲಿಂ ನಾಯಕರ ವಿರುದ್ಧದ ಕ್ರಮದ ವಿಚಾರದಲ್ಲಿ ಜಾತಿಯನ್ನು ಎಳೆದು ತರುವುದು ಸರಿಯಲ್ಲ. ನಾವು ಒಂದು ಪಕ್ಷದ ಚೌಕಟ್ಟಿನಲ್ಲಿ ಇದ್ದ ಮೇಲೆ ಅದರ ನಿಯಮಗಳನ್ನು ಪಾಲಿಸಬೇಕು. ಶಿಸ್ತು ಉಲ್ಲಂಘಿಸಿದಾಗ ಜಾತಿ ಅಥವಾ ಸಮುದಾಯದ ಪ್ರಶ್ನೆ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗರಿಗೆದರಿದ ರಾಜಕೀಯ ಚಟುವಟಿಕೆಗಳು
ಈ ಎಲ್ಲ ಅಸಮಾಧಾನಗಳ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಹಠಾತ್ ಬೆಳವಣಿಗೆಗಳು ಸಂಭವಿಸಿವೆ. ಸಚಿವರಾದ ಕೆ ಎನ್ ರಾಜಣ್ಣ, ಎಂ ಬಿ ಪಾಟೀಲ್ ಮತ್ತು ಸಲೀಂ ಅಹ್ಮದ್ ಅವರು ಮುಖ್ಯಮಂತ್ರಿಗಳ ನಿವಾಸ ಕಾವೇರಿಗೆ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇನ್ನೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮುಸ್ಲಿಂ ನಾಯಕರ ವಿರುದ್ಧದ ಕ್ರಮ ಮತ್ತು ಆಪ್ತರ ಅಸಮಾಧಾನದ ವಿಚಾರಗಳು ಈ ಭೇಟಿಯ ಪ್ರಮುಖ ವಿಷಯಗಳಾಗಿದ್ದವು ಎನ್ನಲಾಗಿದೆ. ಒಟ್ಟಿನಲ್ಲಿ ಕೈ ಪಾಳಯದ ಒಳಗಿನ ಈ ಬಣ ಬಡಿದಾಟ ಈಗ ಹೈಕಮಾಂಡ್ ಮೆಟ್ಟಿಲೇರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.







