ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸದ್ಯದ ರಾಜಕೀಯ ಶೈಲಿಯ ಬಗ್ಗೆ ಅತ್ಯಂತ ಕುತೂಹಲಕಾರಿ ಮತ್ತು ಗಂಭೀರ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಈಗ ಅನಿವಾರ್ಯವಾಗಿ ಕಾಂಪ್ರಮೈಸ್ ಅಂದರೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಾರಕಿಹೊಳಿ ವಿಶ್ಲೇಷಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳ ಬೆನ್ನಲ್ಲೇ ಸಚಿವರ ಈ ಹೇಳಿಕೆ ಹೊರಬಂದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸುದ್ದಿಗಾರರ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು ರಾಜಕಾರಣದಲ್ಲಿ ಸಮಯ ಬಹಳ ಮುಖ್ಯ. ಎಲ್ಲಾ ಕಾಲದಲ್ಲೂ ಕೇವಲ ಬಿಗಿಯಾದ ಅಥವಾ ಕಠಿಣ ರಾಜಕಾರಣ ಮಾಡಲು ಸಾಧ್ಯವಿಲ್ಲ. ಸದ್ಯದ ಸಂದರ್ಭಕ್ಕೆ ತಕ್ಕಂತೆ ನಡೆಯುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಸಿದ್ದರಾಮಯ್ಯ ಅವರು ಕೆಲವೊಂದು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರನ್ನು ರಕ್ಷಿಸುವಲ್ಲಿ ವೀಕ್ ಆಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ರಾಜಕೀಯದಲ್ಲಿ ಕೆಲವೊಮ್ಮೆ ಮಣಿಯಬೇಕಾಗುತ್ತದೆ ಮತ್ತು ಕೆಲವೊಮ್ಮೆ ಕಠಿಣವಾಗಿ ನಿಲ್ಲಬೇಕಾಗುತ್ತದೆ. ಇದೆಲ್ಲವೂ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ.
ಇದೇ ವೇಳೆ ಅಲ್ಪಸಂಖ್ಯಾತ ಸಮುದಾಯದ ಮುನಿಸಿನ ಬಗ್ಗೆಯೂ ಸತೀಶ್ ಜಾರಕಿಹೊಳಿ ಪಕ್ಷದ ನಾಯಕರಿಗೆ ನೇರ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ದಾವಣಗೆರೆ ಉಪ ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ನಾಯಕರಿಗೆ ನೋಟಿಸ್ ನೀಡುವುದು ಅಥವಾ ಅಮಾನತು ಮಾಡುವ ಕ್ರಮಗಳು ಸರಿಯಲ್ಲ. ಇಂತಹ ತರಾತುರಿಯ ನಿರ್ಧಾರಗಳು ಮುಸ್ಲಿಂ ಮತಬ್ಯಾಂಕ್ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಚುನಾವಣಾ ಫಲಿತಾಂಶ ಬರುವವರೆಗೂ ತಾಳ್ಮೆಯಿಂದ ಕಾಯಬೇಕು. ಯಾರಾದರೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ಫಲಿತಾಂಶದ ನಂತರ ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ಈಗಾಗಲೇ ಪಕ್ಷದ ಹಿರಿಯ ನಾಯಕರಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ವಿಧಾನಪರಿಷತ್ ಸದಸ್ಯ ಜಬ್ಬಾರ್ ಅವರ ಅಮಾನತಿನ ಕುರಿತು ಸಕಾರಾತ್ಮಕವಾಗಿ ಮಾತನಾಡಿದ ಅವರು ಪಕ್ಷದಲ್ಲಿ ಹಿಂದೆ ಅನೇಕರು ಅಮಾನತುಗೊಂಡು ಮತ್ತೆ ವಾಪಸ್ ಬಂದಿದ್ದಾರೆ. ಜಬ್ಬಾರ್ ಕೂಡ ಶೀಘ್ರವೇ ಪಕ್ಷದ ಮುಖ್ಯವಾಹಿನಿಗೆ ಬರಲಿದ್ದಾರೆ ಎಂಬ ಸುಳಿವು ನೀಡಿದರು. ಇನ್ನು ಸಚಿವ ಸಂಪುಟ ಪುನಾರಚನೆಯ ಬಗ್ಗೆ ಮಾತನಾಡಿದ ಅವರು ಹೈಕಮಾಂಡ್ ಅನುಮತಿ ನೀಡಿದ ತಕ್ಷಣವೇ ಈ ಪ್ರಕ್ರಿಯೆ ನಡೆಯಲಿದೆ. ಹೊಸ ಸಂಪುಟದಲ್ಲಿ ಹಿರಿಯ ಅನುಭವಿಗಳು ಮತ್ತು ಕಿರಿಯ ಉತ್ಸಾಹಿಗಳ ಮಿಶ್ರಣವಿರಲಿದೆ ಎಂದು ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ಸಚಿವರ ಈ ಎಲ್ಲಾ ಮಾತುಗಳು ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ವಿದ್ಯಮಾನಗಳನ್ನು ಪ್ರತಿಬಿಂಬಿಸುವಂತಿವೆ.







