ಮೈಸೂರು: ಕರ್ನಾಟಕದಲ್ಲಿ ಹಿಜಾಬ್ ನಿಷೇಧವನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಅತ್ಯಂತ ಕಟು ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ.
ಅಭಿವೃದ್ಧಿ ಶೂನ್ಯ ಸರ್ಕಾರಕ್ಕೆ ಬುರ್ಖಾವೇ ಗತಿ
ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಮೂರು ಕಾಸಿನ ಕೆಲಸವನ್ನೂ ಮಾಡಿಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ ಜನರಿಗೆ ಮುಖ ತೋರಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಸಿಎಂ ಮತ್ತು ಡಿಸಿಎಂ ಅವರಿಗೆ ತಮ್ಮ ಮುಖ ಮುಚ್ಚಿಕೊಳ್ಳಲು ಈಗ ಬುರ್ಖಾದ ಅಗತ್ಯವಿದೆ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಕೇಳುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಈ ನಾಯಕರಿಗೆ ಮಾತ್ರ ತಮ್ಮ ವಿಫಲತೆಯನ್ನು ಮುಚ್ಚಿಕೊಳ್ಳಲು ಬುರ್ಖಾ ಬೇಕೇ ಬೇಕು ಎಂದು ಅವರು ಗುಡುಗಿದ್ದಾರೆ.
ಹಿಂದೂಗಳನ್ನು ಕೆರಳಿಸುವುದೇ ಕಾಂಗ್ರೆಸ್ ಅಜೆಂಡಾ
ಕಾಂಗ್ರೆಸ್ ಸರ್ಕಾರದ ಈ ನಿರ್ಧಾರದ ಹಿಂದೆ ಮುಸ್ಲಿಮರ ಮೇಲಿನ ಪ್ರೀತಿಗಿಂತ ಹೆಚ್ಚಾಗಿ ಹಿಂದೂಗಳನ್ನು ಕೆರಳಿಸುವ ಕುತಂತ್ರ ಅಡಗಿದೆ. ಸಮವಸ್ತ್ರ ಸಂಹಿತೆಯನ್ನು ಬದಿಗಿಟ್ಟು ಹಿಜಾಬ್ಗೆ ಅವಕಾಶ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯ ಅವರು ಕರ್ನಾಟಕದ ಖಮೇನಿ ಆಗಲು ಪ್ರಯತ್ನಿಸುತ್ತಿದ್ದಾರೆ ಮತ್ತು ರಾಜ್ಯದಲ್ಲಿ ತಾಲಿಬಾನ್ ಮಾದರಿಯ ಆಡಳಿತ ತರಲು ಹೊರಟಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಹಿಂದೂಗಳ ಒಗ್ಗಟ್ಟಿಗೆ ಕರೆ
ಸನಾತನ ಧರ್ಮದ ನಾಶಕ್ಕೆ ಸಿದ್ದರಾಮಯ್ಯ ಅವರಂತಹ ನಾಯಕರು ಹೊಂಚು ಹಾಕುತ್ತಿದ್ದಾರೆ. ಆದ್ದರಿಂದ ಹಿಂದೂಗಳು ಜಾತಿ-ಜಾತಿಗಳ ಹೆಸರಿನಲ್ಲಿ ಕಿತ್ತಾಡುವುದನ್ನು ಬಿಟ್ಟು, ಧರ್ಮದ ರಕ್ಷಣೆಗಾಗಿ ಒಗ್ಗೂಡಬೇಕಾದ ಕಾಲ ಬಂದಿದೆ. ನಾವು ಧರಿಸುವ ಜನಿವಾರ ಅಥವಾ ಶಿವಧಾರವನ್ನು ಬಟ್ಟೆಯ ಒಳಗೆ ಹಾಕಿಕೊಳ್ಳುತ್ತೇವೆ, ಅದನ್ನು ಎಂದಿಗೂ ಪ್ರದರ್ಶನ ಮಾಡುವುದಿಲ್ಲ. ಇವುಗಳಿಗೆ ಅನುಮತಿ ನೀಡಲು ಇವರು ಯಾವ ದೊಣ್ಣೆ ನಾಯಕರು ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪೀಡೆ ತೊಲಗಿಸುವ ಕಾಲ ಹತ್ತಿರದಲ್ಲಿದೆ
ಇನ್ನು ಎರಡು ವರ್ಷ ಕಳೆಯಲಿ, ರಾಜ್ಯದ ಜನತೆ ಈ ಕಾಂಗ್ರೆಸ್ ಸರ್ಕಾರಕ್ಕೆ ತರ್ಪಣ ಬಿಡಲಿದ್ದಾರೆ. ಪೀಡೆ ತೊಲಗಿತು ಎಂದು ಜನರೇ ಸಂಭ್ರಮಿಸಲಿದ್ದಾರೆ. ಶಾಲೆಗಳಲ್ಲಿ ಸಮಾನತೆ ಇರಬೇಕು, ಅಲ್ಲಿ ಬುರ್ಕಾವೂ ಬೇಡ ಮತ್ತು ಕೇಸರಿ ಶಾಲೂ ಬೇಡ. ಆದರೆ ಮತಬ್ಯಾಂಕ್ಗಾಗಿ ಕಾಂಗ್ರೆಸ್ ಇಂತಹ ಕೆಟ್ಟ ಸಂಪ್ರದಾಯಕ್ಕೆ ಕೈಹಾಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







