ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ದಶಕಗಳ ಕಾಲ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಪತನಗೊಂಡಿದ್ದು, ಬಿಜೆಪಿ ಐತಿಹಾಸಿಕ ಜಯಭೇರಿ ಬಾರಿಸಿದೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸುವೆಂದು ಅಧಿಕಾರಿ, ತಮ್ಮ ಆಡಳಿತದ ಆರಂಭದಲ್ಲೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಮಾದರಿಯನ್ನು ಬಂಗಾಳದಲ್ಲೂ ಜಾರಿಗೆ ತರುವ ಮೂಲಕ ಅಕ್ರಮ ಕಟ್ಟಡಗಳ ವಿರುದ್ಧ ಯುದ್ಧ ಸಾರಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಸುವೆಂದು ಅಧಿಕಾರಿ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ಸುಧಾರಣೆಗೆ ಆದ್ಯತೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಲಿಗುರಿ ಭಾಗದಲ್ಲಿ ದಶಕಗಳಿಂದ ಬೆಳೆದು ನಿಂತಿದ್ದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ವಿಶೇಷವೆಂದರೆ, ಈ ಕಾರ್ಯಾಚರಣೆಗಾಗಿ ಬರೋಬ್ಬರಿ 24 ಬುಲ್ಡೋಜರ್ಗಳನ್ನು ಬಳಸಲಾಗುತ್ತಿದ್ದು, ಸಿಲಿಗುರಿಯ ಅಕ್ರಮ ಅತಿಕ್ರಮಣಕಾರರಲ್ಲಿ ನಡುಕ ಹುಟ್ಟಿಸಿದೆ.
ಕೇವಲ ಆದೇಶಕ್ಕೆ ಸೀಮಿತವಾಗದ ಸಿಎಂ ಸುವೆಂದು ಅಧಿಕಾರಿ, ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ ಕಾರ್ಯಾಚರಣೆಯ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯ ಬೆನ್ನಲ್ಲೇ ಸಿಲಿಗುರಿ ಸಬ್ ಡಿವಿಷನ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ತುರ್ತು ಸಭೆ ನಡೆಸಿ, ಅಕ್ರಮ ಕಟ್ಟಡಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಈ ಬೃಹತ್ ಕಾರ್ಯಾಚರಣೆಗಾಗಿ ಪಶ್ಚಿಮ ಬಂಗಾಳ ಸರ್ಕಾರವು ವಿಶೇಷವಾಗಿ ಉತ್ತರ ಪ್ರದೇಶದಿಂದ 24 ಬುಲ್ಡೋಜರ್ಗಳನ್ನು ತರಿಸಿಕೊಂಡಿರುವುದು ರಾಜ್ಯದಲ್ಲಿ ನಡೆಯುತ್ತಿರುವ ಬದಲಾವಣೆಯ ತೀವ್ರತೆಗೆ ಸಾಕ್ಷಿಯಾಗಿದೆ.
ಸಿಲಿಗುರಿ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ಹಾವಳಿ ಮಿತಿಮೀರಿದ್ದು, ಈ ಹಿಂದೆ ಅಧಿಕಾರದಲ್ಲಿದ್ದವರ ಕುಮ್ಮಕ್ಕಿನಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂಬ ಗಂಭೀರ ಆರೋಪಗಳಿವೆ. ಪಾಲಿಕೆಯ ಈ ಬೇಜವಾಬ್ದಾರಿತನಕ್ಕೆ ಅಂಕುಶ ಹಾಕಲು ಮುಂದಾಗಿರುವ ಸುವೆಂದು ಅಧಿಕಾರಿ ಸರ್ಕಾರ, ಈಗಾಗಲೇ ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ. ಕೆಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದರೂ, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನೀಡಿದ್ದ ಭರವಸೆಯಂತೆ, ಬಾಂಗ್ಲಾದೇಶದಿಂದ ಅಕ್ರಮವಾಗಿ ಒಳನುಸುಳಿ ನೆಲೆಸಿರುವವರನ್ನು ಗುರುತಿಸಿ ಹೊರಹಾಕುವ ಮತ್ತು ಯೋಗಿ ಮಾಡೆಲ್ ಆಡಳಿತ ತರುವ ಮಾತುಗಳನ್ನು ಈಗ ಸುವೆಂದು ಅಧಿಕಾರಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಅಕ್ರಮ ಆಸ್ತಿ ಮತ್ತು ಅತಿಕ್ರಮಣಗಳ ವಿರುದ್ಧ ಬುಲ್ಡೋಜರ್ ಅಬ್ಬರ ಮುಂದುವರಿಯಲಿದ್ದು, ಪಶ್ಚಿಮ ಬಂಗಾಳವು ಶಿಸ್ತಿನ ಹಾದಿಯಲ್ಲಿ ಸಾಗಲಿದೆ ಎಂಬ ಸಂದೇಶವನ್ನು ನೂತನ ಸರ್ಕಾರ ರವಾನಿಸಿದೆ.







