ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ವೇಳೆ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡಿದ್ದ ಯೂಟ್ಯೂಬರ್ ಧ್ರುವ್ ರಾಠಿಗೆ ಬಾಲಿವುಡ್ ನಟಿ ಗುಲ್ ಪನಾಗ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ದೇಶದ ಘನತೆಗೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಅವರು ಕಿಡಿಕಾರಿದ್ದಾರೆ.
ಧ್ರುವ್ ರಾಠಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಏನು?
ಇತ್ತೀಚೆಗೆ ಪ್ರಧಾನಿ ಮೋದಿ ನಾರ್ವೆ ಪ್ರವಾಸದಲ್ಲಿದ್ದಾಗ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸದೆ ಮರಳಿದ್ದರು. ಈ ವಿಡಿಯೋವನ್ನು ಹಂಚಿಕೊಂಡಿದ್ದ ಧ್ರುವ್ ರಾಠಿ, ಪ್ರಧಾನಿ ಮೋದಿ ಹೋದಲ್ಲೆಲ್ಲಾ ಅವಮಾನಕ್ಕೆ ಒಳಗಾಗುತ್ತಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಕಳೆದ 12 ವರ್ಷಗಳಿಂದ ಒಂದೂ ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ ಪಾರದರ್ಶಕ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದರು. ಅಷ್ಟೇ ಅಲ್ಲದೆ, ವಿದೇಶಿ ಮಾಧ್ಯಮಗಳು ಮೋದಿಯವರನ್ನು ಎಲ್ಲೇ ಕಂಡರೂ ಹೀಗೆಯೇ ಅವಮಾನಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು.
ನಟಿ ಗುಲ್ ಪನಾಗ್ ಅವರ ಖಡಕ್ ಪ್ರತಿಕ್ರಿಯೆ
ಧ್ರುವ್ ರಾಠಿ ಅವರ ಈ ಪೋಸ್ಟ್ ಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ನಟಿ ಗುಲ್ ಪನಾಗ್, ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ವಿರೋಧಿಸುವ, ಟೀಕಿಸುವ ಮತ್ತು ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಪ್ರಧಾನಿಯನ್ನು ಇಷ್ಟಪಡದಿರುವುದು ನಿಮ್ಮ ವೈಯಕ್ತಿಕ ವಿಚಾರ. ಆದರೆ ಒಬ್ಬ ವ್ಯಕ್ತಿಯನ್ನು ಅಥವಾ ಪ್ರಧಾನಿಯನ್ನು ವಿರೋಧಿಸುವ ನೆಪದಲ್ಲಿ ದೇಶದ ಘನತೆಯನ್ನು ಹರಾಜು ಹಾಕುವುದು ಸರಿಯಲ್ಲ ಎಂದು ಹೇಳಿದ್ದಾರೆ. ಪ್ರಧಾನಿಯವರು ವಿದೇಶದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ಹುದ್ದೆಗೆ ಅಥವಾ ಅವರ ವ್ಯಕ್ತಿತ್ವಕ್ಕೆ ಕುಂದು ತರುವಂತೆ ವಿದೇಶಿಯರ ಮುಂದೆ ಹಾಸ್ಯ ಮಾಡುವುದು ಶೋಭೆ ತರುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ನಾರ್ವೆಯಲ್ಲಿ ನಡೆದಿದ್ದ ಅಸಲಿ ಘಟನೆ ಏನು?
ಪ್ರಧಾನಿ ಮೋದಿ ನಾರ್ವೆ ಪ್ರವಾಸದ ವೇಳೆ ಓಸ್ಲೋದಲ್ಲಿ ಅಲ್ಲಿನ ಪ್ರಧಾನಿ ಜೋನಸ್ ಗಹರ್ ಸ್ಟೋರೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಅವರು ಹೊರಬರುವ ವೇಳೆ ಹೆಲ್ಲೆ ಲಿಂಗ್ ಎಂಬ ಪತ್ರಕರ್ತೆ, ಮೋದಿಯವರೇ ನೀವು ಜಗತ್ತಿನ ಅತ್ಯಂತ ಮುಕ್ತ ಪತ್ರಿಕಾ ಮಾಧ್ಯಮದ ಕೆಲವು ಪ್ರಶ್ನೆಗಳಿಗೆ ಯಾಕೆ ಉತ್ತರಿಸಬಾರದು ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಉತ್ತರಿಸದ ಪ್ರಧಾನಿ ಅಲ್ಲಿಂದ ಮುಗುಳ್ನಗುತ್ತಾ ಹೊರಟಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡು ಧ್ರುವ್ ರಾಠಿ ಟೀಕೆ ಮಾಡಿದ್ದರು.
ಮೋದಿ ಬೆನ್ನಿಗೆ ನಿಂತ ಕಮಲ್ ಹಾಸನ್
ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧದ ಟೀಕೆಗಳು ತಾರಕಕ್ಕೇರುತ್ತಿರುವ ಬೆನ್ನಲ್ಲೇ, ನಟ ಕಮಲ್ ಹಾಸನ್ ಕೂಡ ದೇಶದ ಹಿತದೃಷ್ಟಿಯಿಂದ ಪ್ರಧಾನಿ ಬೆನ್ನಿಗೆ ನಿಂತಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ದೇಶದ ಸಂಪತ್ತು ಮತ್ತು ಗೌರವದ ವಿಷಯ ಬಂದಾಗ ನಾವೆಲ್ಲರೂ ಒಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.







