ಕರ್ನಾಟಕ ರಾಜಕೀಯದಲ್ಲಿ ಭಾರೀ ಕುತೂಹಲ ಸೃಷ್ಟಿಯಾಗಿದ್ದು, ರಾಜ್ಯದ ಅಧಿಕಾರ ರಾಜಕಾರಣಕ್ಕೆ ಇದೀಗ ದೆಹಲಿ ಕೇಂದ್ರಬಿಂದುವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ‘ಫೈನಲ್ ಫೈಟ್’ ಆರಂಭವಾಗಿದ್ದು, ಇಡೀ ರಾಜ್ಯದ ಚಿತ್ತ ಇದೀಗ ರಾಷ್ಟ್ರ ರಾಜಧಾನಿಯತ್ತ ನೆಟ್ಟಿದೆ.
ಇಂದು ಕಾಂಗ್ರೆಸ್ ಹೈಕಮಾಂಡ್ ಮೂರು ಹಂತಗಳಲ್ಲಿ ಮಹತ್ವದ ಸಭೆ ನಡೆಸಲಿದ್ದು, ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಯಲಿದೆ. ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಪ್ರತ್ಯೇಕ ಸಭೆ ನಡೆಯಲಿದ್ದು, ನಂತರ ಇಬ್ಬರು ನಾಯಕರನ್ನೂ ಒಳಗೊಂಡ ಮಹತ್ವದ ಜಂಟಿ ಸಭೆ ನಡೆಯಲಿದೆ.
ಈ ಸಭೆಗಳಲ್ಲಿ ರಾಜ್ಯದ ನಾಯಕತ್ವ ಬದಲಾವಣೆ, ಮುಖ್ಯಮಂತ್ರಿ ಸ್ಥಾನ ಕುರಿತ ಅಂತಿಮ ತೀರ್ಮಾನ ಹಾಗೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ವಲಯದಲ್ಲಿ ತೀವ್ರ ಚಟುವಟಿಕೆಗಳು ಆರಂಭವಾಗಿದ್ದು, ನಾಯಕರು & ಶಾಸಕರು ದೆಹಲಿಯತ್ತ ಮುಖ ಮಾಡಿದ್ದಾರೆ.
ಸಭೆಯ ಬಳಿಕ ಹೈಕಮಾಂಡ್ ಕೈಗೊಳ್ಳುವ ನಿರ್ಧಾರ ರಾಜ್ಯ ರಾಜಕೀಯದ ಮುಂದಿನ ದಿಕ್ಕನ್ನು ನಿರ್ಧರಿಸುವ ಸಾಧ್ಯತೆ ಇದ್ದು, ಸಿದ್ದರಾಮಯ್ಯ ಮುಂದುವರೆಯಲಿದ್ದಾರಾ? ಅಥವಾ ಡಿಕೆ ಶಿವಕುಮಾರ್ಗೆ ಅವಕಾಶ ಸಿಗಲಿದೆಯಾ? ಎಂಬ ಪ್ರಶ್ನೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.







