ಧಾರವಾಡ: ಪ್ರಭು ಶ್ರೀರಾಮಚಂದ್ರ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗಳ ಬಗ್ಗೆ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಪ್ರೊ. ಕೆ.ಎಸ್. ಭಗವಾನ್ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಕೆಂಡಾಮಂಡಲವಾಗಿದ್ದಾರೆ. ಭಗವಾನ್ ಅವರೇ ನಿಮ್ಮ ಉದ್ಧಟತನ ಮಿತಿ ಮೀರಿದರೆ ನಾಲಿಗೆ ಕಿತ್ತು ಬಿಸಾಕಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ರವಾನಿಸಿದ್ದಾರೆ.
ಧಾರವಾಡದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ. ಭಗವಾನ್ ಅವರ ಇತ್ತೀಚಿನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು. ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ. ಕೋಟ್ಯಂತರ ಹಿಂದುಗಳ ಆರಾಧ್ಯ ದೈವವಾಗಿರುವ ಶ್ರೀರಾಮನ ಜನ್ಮದ ಬಗ್ಗೆ, ಮಹಾಕಾವ್ಯ ರಾಮಾಯಣದ ಬಗ್ಗೆ ಪದೇ ಪದೇ ಅತ್ಯಂತ ಕೀಳು ಮಟ್ಟದ ಪದಬಳಕೆ ಮಾಡುತ್ತಿರುವ ಭಗವಾನ್ ಅವರ ನಾಲಿಗೆ ಕಿತ್ತು ಬಿಸಾಕುವ ಕಾಲ ಸನ್ನಿಹಿತವಾಗಿದೆ ಎಂದು ಗುಡುಗಿದ್ದಾರೆ.
ಬರವಣಿಗೆ ಮತ್ತು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳ ನಂಬಿಕೆಗಳನ್ನು ಹಾಳು ಮಾಡುತ್ತಿರುವ ಭಗವಾನ್ ಅವರನ್ನು ಸಮಾಜಘಾತುಕ ವ್ಯಕ್ತಿ ಎಂದು ಕರೆದ ಮುತಾಲಿಕ್, ಏ ಭಗವಾನ್ ನೀನು ನಿನ್ನ ತಂದೆಗೆ ಹುಟ್ಟಿದ್ದೀಯೆ ಎಂಬುದಕ್ಕೆ ಮೊದಲು ಸಾಕ್ಷಿ ಕೊಡು ಎಂದು ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದರು. ಸಾವಿರಾರು ವರ್ಷಗಳಿಂದ ಭಕ್ತಿ ಭಾವದಿಂದ ಶ್ರೀರಾಮನ ಪೂಜೆ ನಡೆಯುತ್ತಿರುವ ಈ ಪುಣ್ಯ ಭೂಮಿಯಲ್ಲಿ ಹುಟ್ಟಿ ನೀನು ಸಂವಿಧಾನ ವಿರೋಧಿ ಹಾಗೂ ಧರ್ಮ ವಿರೋಧಿ ಕೆಲಸ ಮಾಡುತ್ತಿದ್ದೀಯ ಎಂದು ಕಿಡಿಕಾರಿದ್ದಾರೆ.
ಭಗವಾನ್ ಅವರು ಕೇವಲ ಒಮ್ಮೆ ಅಥವಾ ಎರಡು ಬಾರಿ ಈ ರೀತಿ ಮಾಡಿಲ್ಲ. ಇದು ಅವರ ನಿರಂತರ ಚಾಳಿಯಾಗಿದೆ. ಹಿಂದೂ ಪರಂಪರೆ, ಹಿಂದೂ ದೇವರುಗಳು ಹಾಗೂ ಪವಿತ್ರ ಧಾರ್ಮಿಕ ಗ್ರಂಥಗಳ ಬಗ್ಗೆ ಉದ್ದೇಶಪೂರ್ವಕವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಇವರ ವಿರುದ್ದ ಸುಮೋಟೋ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಥವಾ ಭಗವಾನ್ ಈ ರೀತಿಯ ಹೇಳಿಕೆಗಳನ್ನು ನಿಲ್ಲಿಸದಿದ್ದರೆ ಶ್ರೀರಾಮ ಸೇನೆ ಸುಮ್ಮನೆ ಕೂರುವುದಿಲ್ಲ. ಬೀದಿಗಿಳಿದು ಅವರಿಗೆ ತಕ್ಕ ಉತ್ತರ ನೀಡಲು ಸಿದ್ಧವಾಗಿದೆ ಎಂದು ಮುತಾಲಿಕ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ವಿವಾದದ ಮೂಲ ಏನು
ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರೊ. ಕೆ.ಎಸ್. ಭಗವಾನ್ ಅವರು ಶ್ರೀರಾಮನ ಹುಟ್ಟಿನ ಬಗ್ಗೆ ಅತ್ಯಂತ ವಿವಾದಾತ್ಮಕ ಮಾತುಗಳನ್ನು ಆಡಿದ್ದರು. ನೀವು ದಿನನಿತ್ಯ ಪೂಜೆ ಮಾಡುವ ಶ್ರೀರಾಮ ದಶರಥ ಮಹಾರಾಜನಿಗೆ ಹುಟ್ಟಿದವನೇ ಅಲ್ಲ. ಶ್ರೀರಾಮನ ತಂದೆ ಎನ್ನಲಾಗುವ ದಶರಥ ಪುತ್ರ ಕಾಮೇಷ್ಟಿ ಯಾಗ ಮಾಡುತ್ತಾನೆ. ಆ ಯಾಗದ ಪೂಜೆಯಲ್ಲಿ ರಾಣಿಯರು ಪುರೋಹಿತರ ಜತೆ ರಾತ್ರಿ ಮಲಗಬೇಕಿತ್ತು. ಪುರೋಹಿತರ ಜತೆ ರಾಣಿ ರಾತ್ರಿ ಕಳೆದಿದ್ದಾಳೆ ಎಂದರೆ ಅದರ ಅರ್ಥ ನೀವೇ ಮಾಡಿಕೊಳ್ಳಿ ಎಂದು ನಾಲಿಗೆ ಹರಿಬಿಟ್ಟಿದ್ದರು.
ಅಷ್ಟೇ ಅಲ್ಲದೆ, ಈ ವಿಚಾರವನ್ನು ನಾನು ಗಾಳಿಯಲ್ಲಿ ಹೇಳುತ್ತಿಲ್ಲ. ರಾಮ ಮಂದಿರ ಏಕೆ ಬೇಕು ಎನ್ನುವ ನನ್ನ ಪುಸ್ತಕದಲ್ಲಿ ಇದನ್ನು ಸವಿಸ್ತಾರವಾಗಿ ಬರೆದಿದ್ದೇನೆ. ವಾಲ್ಮೀಕಿ ರಾಮಾಯಣದಲ್ಲಿಯೇ ಇದರ ಬಗ್ಗೆ ಸ್ಪಷ್ಟ ಉಲ್ಲೇಖವಿದೆ ಎಂದು ಭಗವಾನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇದು ಈಗ ಹಿಂದುತ್ವವಾದಿ ಸಂಘಟನೆಗಳ ಮತ್ತು ಶ್ರೀರಾಮ ಭಕ್ತರ ತೀವ್ರ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿದೆ. ಮುತಾಲಿಕ್ ಅವರ ಈ ವಾಗ್ದಾಳಿಯೊಂದಿಗೆ ಈ ವಿವಾದ ಮತ್ತಷ್ಟು ತಾರಕಕ್ಕೇರುವ ಲಕ್ಷಣಗಳು ಗೋಚರಿಸುತ್ತಿವೆ.







