ಮಹಾರಾಷ್ಟ್ರದ ಪುಣೆ ಸಮೀಪದ ಲೋಹಗಡ್ ಕೋಟೆಯಲ್ಲಿ ನಡೆದಿದ್ದ ಭೀಕರ ಘಟನೆಯೊಂದು ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಫೋಟೋ ತೆಗೆಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದು ಆರಂಭದಲ್ಲಿ ನಂಬಲಾಗಿದ್ದ 24 ವರ್ಷದ ಕೇತನ್ ವಿಶಾಲ್ ಅಗರವಾಲ್ ಸಾವು ಈಗ ವ್ಯವಸ್ಥಿತ ಕೊಲೆಯಾಗಿ ಮಾರ್ಪಟ್ಟಿದೆ. ತನ್ನನ್ನು ಮದುವೆಯಾಗಲಿದ್ದ ಯುವತಿಯೇ ಪ್ರಿಯಕರನ ಜೊತೆ ಸೇರಿ ಈ ಭೀಕರ ಸಂಚು ರೂಪಿಸಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಜೂನ್ 19 ರಂದು ಸಿಯಾ ಗೋಯಲ್ ಎಂಬಾಕೆಯ ಹುಟ್ಟಹಬ್ಬದ ಅಂಗವಾಗಿ ಲೋಹಗಡ್ ಕೋಟೆಗೆ ಪ್ರವಾಸ ಹೋಗಿದ್ದಾಗ ಈ ಘಟನೆ ಸಂಭವಿಸಿತ್ತು. ಸುಮಾರು 350 ಅಡಿ ಆಳದ ಕಂದಕಕ್ಕೆ ಕೇತನ್ ಬಿದ್ದು ಸಾವನ್ನಪ್ಪಿದ್ದರು. ಪೊಲೀಸರು ಆರಂಭದಲ್ಲಿ ಇದೊಂದು ಆಕಸ್ಮಿಕ ಅಪಘಾತ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸಿಯಾ ನೀಡಿದ ಹೇಳಿಕೆಗಳಲ್ಲಿನ ಗೊಂದಲ ಹಾಗೂ ಆಕೆಯ ನಡವಳಿಕೆ ಪೊಲೀಸರಿಗೆ ತೀವ್ರ ಸಂಶಯ ಮೂಡಿಸಿತ್ತು.
ತನಿಖೆ ಮುಂದುವರಿದಂತೆ ದಿಗಿಲು ಹುಟ್ಟಿಸುವ ಸತ್ಯಗಳು ಹೊರಬಂದಿವೆ. 20 ವರ್ಷದ ಸಿಯಾ ಗೋಯಲ್‌ಗೆ ಚೇತನ್ ಚೌಧರಿ ಎಂಬ 22 ವರ್ಷದ ಯುವಕನ ಜೊತೆ ಪ್ರೇಮ ಸಂಬಂಧವಿತ್ತು. ಮನೆಯವರು ನಿಶ್ಚಯಿಸಿದ್ದ ಕೇತನ್ ಜೊತೆ ಮದುವೆಯಾಗಲು ಆಕೆಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ತನ್ನ ಪ್ರೇಮ ಜೀವನಕ್ಕೆ ಕೇತನ್ ಅಡ್ಡಿಯಾಗಿದ್ದಾನೆ ಎಂದು ಭಾವಿಸಿದ ಸಿಯಾ, ಆತನನ್ನು ಶಾಶ್ವತವಾಗಿ ಈ ಪ್ರಪಂಚದಿಂದಲೇ ಇಲ್ಲದಂತೆ ಮಾಡಲು ಪ್ರಿಯಕರನ ಜೊತೆ ಸೇರಿ ಸ್ಕೆಚ್ ಹಾಕಿದ್ದಳು.
ಬಹಳ ಮುಖ್ಯವಾದ ವಿಚಾರವೆಂದರೆ, ಇದು ಕೇತನ್ ಕೊಲೆಗೆ ನಡೆದ ಮೊದಲ ಪ್ರಯತ್ನವಾಗಿರಲಿಲ್ಲ. ಇದಕ್ಕೂ ಮುನ್ನ ಮೇ 31 ಮತ್ತು ಜೂನ್ 14 ರಂದು ಕೂಡ ಟ್ರೆಕ್ಕಿಂಗ್ ನೆಪದಲ್ಲಿ ಕೇತನ್‌ನನ್ನು ಕೋಟೆಗೆ ಕರೆದೊಯ್ದು ಕೊಲೆ ಮಾಡಲು ಯತ್ನಿಸಲಾಗಿತ್ತು. ಒಮ್ಮೆ ಹಾವಿನ ಭಯ ಹುಟ್ಟಿಸಿ ಕಂದಕಕ್ಕೆ ತಳ್ಳಲು ನೋಡಿದ್ದರೂ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಜೂನ್ 19 ರಂದು ಸಿಯಾ ತನ್ನ ಜನ್ಮದಿನದ ನೆಪದಲ್ಲಿ ಕೇತನ್‌ನನ್ನು ಮತ್ತೆ ಅದೇ ಕೋಟೆಗೆ ಕರೆದೊಯ್ದಿದ್ದಾಳೆ. ಅಲ್ಲಿ ರಹಸ್ಯವಾಗಿ ಬಂದಿದ್ದ ಪ್ರಿಯಕರ ಚೇತನ್ ಸಹಾಯದಿಂದ ಕೇತನ್‌ನನ್ನು ಕಂದಕಕ್ಕೆ ತಳ್ಳಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಿಯಾಳ ಚಾಣಾಕ್ಷತನ ಕಂಡು ಪೊಲೀಸರೇ ಬೆರಗಾಗಿದ್ದಾರೆ. ವಿದೇಶ ಪ್ರವಾಸ ತಪ್ಪಿಸಲು ತನ್ನ ಪಾಸ್‌ಪೋರ್ಟ್ ಅನ್ನು ತಾನೇ ಹರಿದು ಹೋಟೆಲ್ ಶೌಚಾಲಯಕ್ಕೆ ಎಸೆದಿದ್ದಳು. ಇತ್ತ ಕೇತನ್ ತನ್ನ ಭಾವಿ ಪತ್ನಿಯ ಹುಟ್ಟಹಬ್ಬಕ್ಕಾಗಿ ಮಹಾಬಲೇಶ್ವರದಲ್ಲಿ 40 ಐಷಾರಾಮಿ ಕೊಠಡಿಗಳನ್ನು ಬುಕ್ ಮಾಡಿ ದೊಡ್ಡ ಮಟ್ಟದ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದ. ಮದುವೆಗಾಗಿ ಜೈಪುರದಲ್ಲಿ ಭವ್ಯ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ ಈ ಸಂಭ್ರಮ ಯಾವುದೂ ಸಿಯಾಳಿಗೆ ಬೇಕಿರಲಿಲ್ಲ.
ಪೊಲೀಸರು ಸಿಯಾಳ ಮೊಬೈಲ್ ಕರೆಗಳ ವಿವರ, ಸಾಮಾಜಿಕ ಜಾಲತಾಣಗಳ ಚಟುವಟಿಕೆ ಹಾಗೂ ಡಿಜಿಟಲ್ ಪುರಾವೆಗಳನ್ನು ಕಲೆಹಾಕಿದಾಗ ಸತ್ಯ ಬಯಲಾಗಿದೆ. ಅಪಘಾತ ಎಂದು ನಾಟಕವಾಡಿದ್ದ ಸಿಯಾ ಈಗ ಪೊಲೀಸರ ಬಲೆಗೆ ಬಿದ್ದಿದ್ದು, ಹನಿಮೂನ್ ಹೋಗಬೇಕಿದ್ದ ಜೋಡಿ ಈಗ ಜೈಲು ಪಾಲಾಗುವಂತಾಗಿದೆ. ಮಗನ ಸಾವಿನಿಂದ ಕಂಗಾಲಾಗಿದ್ದ ಕೇತನ್ ಕುಟುಂಬಕ್ಕೆ ಈ ಸತ್ಯ ತಿಳಿದು ಮತ್ತಷ್ಟು ಆಘಾತವಾಗಿದೆ.







