ಬೆಂಗಳೂರು: ಆರ್ ಎಸ್ ಎಸ್ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಸಮನ್ಸ್ ಗೆ ಐಟಿ ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಡಕ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕಾನೂನು ಮತ್ತು ಸಂವಿಧಾನಕ್ಕೆ ಗೌರವ ನೀಡುವವರು, ಹೀಗಾಗಿ ನ್ಯಾಯಾಲಯದ ಸಮನ್ಸ್ ಅನ್ನು ಕಾನೂನಾತ್ಮಕವಾಗಿಯೇ ಎದುರಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಸಂಘ ಪರಿವಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಸಂಘದವರು ನಮ್ಮ ಮಾತು ಅಥವಾ ಸಂವಿಧಾನದ ಮಾತು ಕೇಳದಿದ್ದರೂ ಪರವಾಗಿಲ್ಲ, ಕನಿಷ್ಠ ಪಕ್ಷ ಪೇಜಾವರ ಶ್ರೀಗಳ ಮಾತನ್ನಾದರೂ ಕೇಳಲಿ. ಖುದ್ದು ಪೇಜಾವರ ಶ್ರೀಗಳೇ ಆರ್‌ಎಸ್‌ಎಸ್ ನೋಂದಣಿ ಆಗಬೇಕು ಎಂದು ಹೇಳಿದ್ದಾರೆ. ವಿಶ್ವದ ಅತಿ ದೊಡ್ಡ ಸಂಸ್ಥೆ ಎಂದು ಕರೆಸಿಕೊಳ್ಳುವ ಆರ್‌ಎಸ್‌ಎಸ್ ಕಚೇರಿ ಎಲ್ಲಿದೆ ಮತ್ತು ಅದರ ನೋಂದಣಿ ಆಗಿದೆಯಾ ಎಂಬ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಅದರ ಲೆಕ್ಕಪತ್ರಗಳನ್ನು ಯಾರು ನೋಡಿಕೊಳ್ಳುತ್ತಾರೆ? ಒಂದು ವೇಳೆ ಅವರಿಗೆ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ನಾವೇ ಮುಂದೆ ನಿಂತು ನೋಂದಣಿ ಮಾಡಿಸಿ ಅದಕ್ಕೆ ಬೇಕಾದ ಶುಲ್ಕವನ್ನು ಪಾವತಿಸುತ್ತೇವೆ ಎಂದು ಲೇವಡಿ ಮಾಡಿದರು.
ಸಿಎಜಿ ವರದಿಯಲ್ಲಿ ಗ್ಯಾರಂಟಿ ಯೋಜನೆಗಳ ಅಕ್ರಮದ ಬಗ್ಗೆ ಪ್ರಸ್ತಾಪವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ವರದಿಯಲ್ಲಿ ಎಲ್ಲಿಯೂ ದೊಡ್ಡ ಹಗರಣ ನಡೆದಿದೆ ಎಂದು ಹೇಳಿಲ್ಲ. ಇದೊಂದು ತಾಂತ್ರಿಕ ಡಿಬಿಟಿ ವ್ಯವಸ್ಥೆಯಾಗಿದ್ದು ತಾಂತ್ರಿಕ ದೋಷದಿಂದ ಕೆಲವರ ಖಾತೆಗೆ ಒಂದಕ್ಕಿಂತ ಹೆಚ್ಚು ಬಾರಿ ಹಣ ಸಂದಾಯವಾಗಿರಬಹುದು. ಇದೇ ಕಾರಣಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸಲು ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ನಡೆಯುತ್ತಿದೆ. ಸರ್ಕಾರಿ ನೌಕರರು ಇಂತಹ ಸೌಲಭ್ಯಗಳನ್ನು ಪಡೆಯುವುದು ಸರಿಯಲ್ಲ, ಅವರು ಸ್ವಯಂಪ್ರೇರಿತರಾಗಿ ಸೌಲಭ್ಯ ಬಿಟ್ಟುಕೊಡಬೇಕು. ಸದ್ಯಕ್ಕೆ ಯಾವುದೇ ಗಿವ್ ಇಟ್ ಅಪ್ ಅಭಿಯಾನ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ತಿಳಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯೊಳಗೆ ನಡೆದ ಅಡ್ಡ ಮತದಾನಕ್ಕೆ ಅವರ ಪಕ್ಷದ ನಾಯಕರ ನಿರ್ಲಕ್ಷ್ಯವೇ ಕಾರಣ ಎಂದು ಅವರದ್ದೇ ವರದಿ ಹೇಳುತ್ತಿದೆ. ಹಾಗಿದ್ದಲ್ಲಿ ಆ ನಾಯಕರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ ಎಂದು ಸವಾಲು ಹಾಕಿದರು. ಇನ್ನು ಜೆಡಿಎಸ್ ನಾಯಕರು ಅಸ್ತಿತ್ವದ ಭೀತಿಯಿಂದ ನಮ್ಮವರ ಮೇಲೆ ಟೀಕೆ ಮಾಡುತ್ತಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಾಳಿಗೆ ಪ್ರಚೋದನೆ ನೀಡುವುದು ತಪ್ಪು. ಯಾರೇ ಆಗಲಿ ಕಾನೂನಿನ ಚೌಕಟ್ಟಿನಲ್ಲಿ ವರ್ತಿಸಬೇಕು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೌಟುಂಬಿಕ ಕೊಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ಮಗಳೇ ಕುಟುಂಬದವರನ್ನು ಕೊಂದ ಘಟನೆ ಹಾಗೂ ಶಿರಾ ಪ್ರಕರಣಗಳು ಆತಂಕಕಾರಿಯಾಗಿವೆ. ಈ ಬಗ್ಗೆ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಇನ್ನು ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಹೊಸಬರು ಮತ್ತು ಹಳಬರು ಎಲ್ಲರೂ ಸಚಿವ ಸ್ಥಾನ ಕೇಳುತ್ತಿದ್ದಾರೆ. ಹೈಕಮಾಂಡ್ ದೆಹಲಿಯಲ್ಲಿ ಎಲ್ಲವನ್ನೂ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.







