ನವದೆಹಲಿ: ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಅನಾಗರಿಕ ಹಲ್ಲೆ ಮತ್ತು ಭದ್ರತಾ ಪಡೆಗಳ ಅಟ್ಟಹಾಸವನ್ನು ಖಂಡಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಯುವಕರ ಮೇಲೆ ಪೆಲೆಟ್ ಗನ್ ಸೇರಿದಂತೆ ಮಾರಕ ಆಯುಧಗಳನ್ನು ಬಳಸಲು ಕೇಂದ್ರ ಸರ್ಕಾರವೇ ಅನುಮೋದನೆ ನೀಡಿದೆಯೇ ಎಂದು ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಜುಲೈ 20 ರಂದು ದೆಹಲಿಯಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ನ್ಯಾಯಯುತ ಶಿಕ್ಷಣ ವ್ಯವಸ್ಥೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅಶ್ರುವಾಯು ಮತ್ತು ಪೆಲೆಟ್ ಗನ್‌ಗಳನ್ನು ಪ್ರಯೋಗಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ಬದಲು ಸರ್ಕಾರವು ಮಾರಕ ಬಲಪ್ರಯೋಗ ಮಾಡಿರುವುದು ದೇಶವನ್ನೇ ಕೆರಳಿಸಿದೆ. ನೂರಾರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಮಹಿಳಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಉದ್ದೇಶಪೂರ್ವಕವಾಗಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪತ್ರದಲ್ಲಿ ರಾಹುಲ್ ಗಾಂಧಿ ಅವರು 19 ವರ್ಷದ ವಿದ್ಯಾರ್ಥಿ ಸಾಹಿಲ್ ಲೋಚಬ್ ಎಂಬುವವರನ್ನು ಭೇಟಿಯಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಪೊಲೀಸರು ನಡೆಸಿದ ಪೆಲೆಟ್ ಗನ್ ದಾಳಿಯಿಂದಾಗಿ ಸಾಹಿಲ್ ತನ್ನ ಕಣ್ಣನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾನೆ. ದೇಶದ ಯುವಕನೊಬ್ಬನ ಈ ಸ್ಥಿತಿಗೆ ಹೊಣೆ ಯಾರು ಎಂದು ಅವರು ಗೃಹ ಸಚಿವರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿಭಟನಾಕಾರರ ಮೇಲೆ ಸಿವಿಲ್ ಡ್ರೆಸ್‌ನಲ್ಲಿ ಲಾಠಿ ಹಿಡಿದು ಹಲ್ಲೆ ನಡೆಸಿದವರು ಯಾರು? ಅವರು ಪೊಲೀಸ್ ಸಿಬ್ಬಂದಿಯೇ ಅಥವಾ ಖಾಸಗಿ ಸ್ವಯಂಸೇವಕರುಗಳೇ? ಈ ಅಕ್ರಮ ನಿಯೋಜನೆಗೆ ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನಾಕಾರರ ಕುಂದುಕೊರತೆಗಳನ್ನು ಆಲಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಪ್ರಸ್ತುತ ಸರ್ಕಾರವು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಿಂಸಾಚಾರಕ್ಕೆ ಇಳಿದಿದೆ. ನಮ್ಮ ದೇಶದ ಭವಿಷ್ಯವಾಗಿರುವ ಯುವ ಸಮೂಹವು ಇಂದು ಉತ್ತರ ಮತ್ತು ಹೊಣೆಗಾರಿಕೆಯನ್ನು ಬಯಸುತ್ತಿದೆ. ಅವರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಲೋಪದೋಷಗಳ ವಿರುದ್ಧ ಆರಂಭವಾದ ಈ ಹೋರಾಟವು ಸಿಜೆಪಿ ವೇದಿಕೆಯಡಿ ರಾಷ್ಟ್ರವ್ಯಾಪಿ ಚಳವಳಿಯಾಗಿ ರೂಪಾಂತರಗೊಂಡಿದೆ. ಜಂತರ್ ಮಂತರ್‌ನಲ್ಲಿ ಆರಂಭವಾದ ಈ ಆಂದೋಲನಕ್ಕೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಸೇರಿದಂತೆ ಅನೇಕರು ಸಾಥ್ ನೀಡಿದ್ದರು. ಜುಲೈ 20 ರಂದು ಸಂಸತ್ತಿನ ಕಡೆಗೆ ಮೆರವಣಿಗೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಅಮಾನವೀಯ ದಾಳಿಯು ಈ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ಈಗ ರಾಹುಲ್ ಗಾಂಧಿ ಅವರ ಪತ್ರವು ಕೇಂದ್ರ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರಿದೆ.







