ಭಾರತೀಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ನಿತೀಶ್ ತಿವಾರಿ ನಿರ್ದೇಶನದ ಪೌರಾಣಿಕ ಚಿತ್ರ ರಾಮಾಯಣದ ಮೊದಲ ಭಾಗದ ಟ್ರೈಲರ್ ನಿನ್ನೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಆದರೆ ನಿರೀಕ್ಷೆಗೂ ಮೀರಿದ ಟೀಕೆ ಮತ್ತು ಟ್ರೋಲ್ ಗಳಿಗೆ ಸಿನಿಮಾ ತುತ್ತಾಗುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬರೋಬ್ಬರಿ 2000 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೊದಲ ನೋಟ ಪ್ರೇಕ್ಷಕರಿಗೆ ಕೇವಲ ಮಿಶ್ರ ಪ್ರತಿಕ್ರಿಯೆ ನೀಡುವಲ್ಲಿ ಮಾತ್ರ ಯಶಸ್ವಿಯಾಗಿದೆ.
ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯೇ ಹರಿದುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಚಿತ್ರದಲ್ಲಿ ಬಳಸಿರುವ ವಿಎಫ್ ಎಕ್ಸ್ ಗುಣಮಟ್ಟ. ಟ್ರೈಲರ್ ನ ಅನೇಕ ದೃಶ್ಯಗಳಲ್ಲಿ ಗ್ರಾಫಿಕ್ಸ್ ಕೆಲಸ ಅತ್ಯಂತ ಕಳಪೆಯಾಗಿದೆ ಎಂಬುದು ಸಿನಿಪ್ರಿಯರ ನೇರ ಆರೋಪ. ವಿಶೇಷವಾಗಿ ಯಜ್ಞದ ಸಂದರ್ಭದಲ್ಲಿ ಬರುವ ಬೆಂಕಿಯ ದೃಶ್ಯ ಮತ್ತು ಸಾರೋಟನ್ನು ಎಳೆದು ತರುವ ಪ್ರಾಣಿಯ ದೃಶ್ಯಗಳು ಮಕ್ಕಳ ಕಾರ್ಟೂನ್ ಸಿನಿಮಾಗಳನ್ನು ನೆನಪಿಸುತ್ತಿವೆ. ಎಐ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬೆಳೆದಿರುವ ಈ ಕಾಲದಲ್ಲೂ ಇಷ್ಟು ಹಣ ಖರ್ಚು ಮಾಡಿ ಇಂತಹ ಕಳಪೆ ಆನಿಮೇಷನ್ ಮಾದರಿಯ ದೃಶ್ಯಗಳನ್ನು ನೀಡಿದ್ದು ಎಷ್ಟು ಸರಿ ಎಂದು ಪ್ರೇಕ್ಷಕರು ಪ್ರಶ್ನಿಸುತ್ತಿದ್ದಾರೆ.
ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಇಬ್ಬರು ಘಟಾನುಘಟಿ ಕಲಾವಿದರಿಗಿಂತಲೂ ಲಂಕಾಧಿಪತಿ ರಾವಣನಾಗಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರೇ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಟ್ರೈಲರ್ ನಲ್ಲಿ ಯಶ್ ಅವರ ಅಬ್ಬರ ಮತ್ತು ಕ್ರೂರ ನೋಟದ ನಟನೆ ಮಾತ್ರ ನೋಡುಗರಿಗೆ ವಾವ್ ಎನ್ನುವ ಅನುಭವ ನೀಡುತ್ತಿದೆ. ಯಶ್ ಅವರ ಪಾತ್ರ ಬಿಟ್ಟರೆ ಚಿತ್ರದ ಉಳಿದ ಅಂಶಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿವೆ.
ಇನ್ನು ಕೆಲವರು ಈ ಚಿತ್ರವನ್ನು ಹಿಂದಿಯಿಂದ ದಕ್ಷಿಣದ ಭಾಷೆಗಳಿಗೆ ಡಬ್ ಆದ ಸಣ್ಣ ಬಜೆಟ್ ನ ಧಾರಾವಾಹಿಗೆ ಹೋಲಿಸುತ್ತಿದ್ದಾರೆ. 2000 ಕೋಟಿ ರೂಪಾಯಿ ಬಜೆಟ್ ನಲ್ಲಿ ಇಂತಹ ಸಿನಿಮಾ ಮಾಡುವ ಬದಲು ವಿಎಫ್ ಎಕ್ಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿತ್ತು ಎಂದು ಜನರು ಅಭಿಪ್ರಾಯಪಡುತ್ತಿದ್ದಾರೆ. ಒಟ್ಟಾರೆಯಾಗಿ ರಾಮಾಯಣ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗೆ ದೊಡ್ಡ ವೇದಿಕೆ ಒದಗಿಸಿದೆ. ಅಂತಿಮವಾಗಿ ಸಿನಿಮಾ ಬೆಳ್ಳಿತೆರೆಯ ಮೇಲೆ ಯಾವ ರೀತಿ ಮೂಡಿಬರಲಿದೆ ಎಂಬ ಕುತೂಹಲ ಈಗಲೂ ಜೀವಂತವಾಗಿದೆ.







