ಇದು ಕಾಂಗ್ರೆಸ್ ಸರ್ಕಾರದ ಶವಪೆಟ್ಟಿಗೆಗೆ ಕೊನೆಯ ಮೊಳೆ
ಬಿಡದಿಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷ ನಾಯಕರು
ಬಿಡದಿ, ಬಿಡದಿ ಟೌನ್ಶಿಪ್ ಯೋಜನೆ ಜಾರಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ. ಬಿಜೆಪಿ-ಜೆಡಿಎಸ್ ಒಂದಾಗಿ ಹೋರಾಟ ಮಾಡುವ ಮೂಲಕ ಯೋಜನೆಯನ್ನು ಸ್ಥಗಿತಗೊಳಿಸಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧ ಇಂದಿನಿಂದ ಆರಂಭವಾದ ಮೂರು ದಿನಗಳ 38 ಕಿ.ಮೀ. ದೂರದ ಜೆಡಿಎಸ್-ಬಿಜೆಪಿ ಬೃಹತ್ ಪಾದಯಾತ್ರೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬಿಡದಿ ಟೌನ್ಶಿಪ್ ಯೋಜನೆಯಿಂದ 35,000 ಕೋಟಿ ರೂ. ಡೀಲ್ ಮಾಡುತ್ತಿದೆ. ಇಷ್ಟು ಹಣವನ್ನು ಲೂಟಿ ಮಾಡಲು ರೈತರ ಒಪ್ಪಿಗೆ ಇಲ್ಲದೆ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಲಾಗುತ್ತಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಕಾಗೋಡು ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚಿಸಿ, ಬಿಡದಿಯಲ್ಲಿ ಎಷ್ಟು ಮರ, ಹಸು, ಕುರಿ ಎಂದು ಲೆಕ್ಕ ನೀಡಲಾಗಿತ್ತು. ಈ ಯೋಜನೆ ಜಾರಿಗೊಳಿಸಿದರೆ ಸರ್ಕಾರಕ್ಕೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಸಮಿತಿ ಹೇಳಿತ್ತು. ಈ ಸಮಿತಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಸದಸ್ಯರಾಗಿ ಕೆಲಸ ಮಾಡಿದ್ದರು. ಯೋಜನೆ ಜಾರಿ ಮಾಡಬಾರದು ಎಂದು ಸಮಿತಿಯ 22 ಸದಸ್ಯ ಕಾಂಗ್ರೆಸ್ ಶಾಸಕರು ಸಹಿ ಹಾಕಿದ್ದರು ಎಂದರು.
ಈಗ ಯಾವ ನೈತಿಕತೆ ಇಟ್ಟುಕೊಂಡು ಕಾಂಗ್ರೆಸ್ ಈ ಯೋಜನೆ ಜಾರಿ ಮಾಡುತ್ತಿದೆ? ಇದು ಪಾಪದ ಯಾತ್ರೆಯಲ್ಲ. ಕಾಂಗ್ರೆಸ್ನ ಪಾಪದ ಯಾತ್ರೆಗೆ ನಾವು ಕಡಿವಾಣ ಹಾಕಲು ಈ ಯಾತ್ರೆ ಮಾಡುತ್ತಿದ್ದೇವೆ. ಈ ತಪ್ಪಿಗೆ ಕಾಂಗ್ರೆಸ್ ಪ್ರಾಯಶ್ತಿತ್ತ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಸರ್ಕಾರ ರಚಿಸಿದ ಸಮಿತಿ ಯೋಜನೆ ಜಾರಿ ಮಾಡಬಹುದು ಎಂದೇ ವರದಿ ನೀಡುವುದು ಖಚಿತ. ಇದರಲ್ಲಿ ಇರುವವರೆಲ್ಲರೂ ಪೇಮೆಂಟ್ ಗಿರಾಕಿಗಳು. ಸಿಎಂ ಡಿ.ಕೆ.ಶಿವಕುಮಾರ್ ಅವರ ಅಧಿಕಾರದ ಮದ ಹಾಗೂ ಅಹಂಕಾರವನ್ನು ಮುಂದಿನ ಚುನಾವಣೆಯಲ್ಲಿ ಜನರು ಇಳಿಸಲಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡಲಾಗುವುದು. ಜೊತೆಗೆ ಜೆಡಿಎಸ್ನೊಂದಿಗೆ ಫ್ರೀಡಂ ಪಾರ್ಕ್ನಲ್ಲೂ ಹೋರಾಟ ಮಾಡಲು ತೀರ್ಮಾನಿಸಲಾಗುವುದು ಎಂದರು.
ಬಿಡದಿ ಟೌನ್ಶಿಪ್ ಯೋಜನೆಯು ಕಾಂಗ್ರೆಸ್ ಸರ್ಕಾರದ ಶವಪೆಟ್ಟಿಗೆಗೆ ಕೊನೆಯ ಮೊಳೆಯಾಗಲಿದೆ. ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಲು ಯಾವ್ಯಾವುದೋ ತಂತ್ರಗಳನ್ನು ಮಾಡಿದ್ದರು. ಈಗ ಸಚಿವ ಸಂಪುಟದಲ್ಲಿ ಗೊಂದಲ ಉಂಟಾಗಿದೆ. ನಮ್ಮ ಹೋರಾಟದ ಮೂಲಕ ಈ ಯೋಜನೆಯನ್ನು ಸ್ಥಗಿತಗೊಳಿಸುತ್ತೇವೆ ಎಂದರು.







