ಬೆಂಗಳೂರು: ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಾಲಿವುಡ್ ಶೈಲಿಯ ಅದ್ಧೂರಿ ಮೇಕಿಂಗ್ ಮತ್ತು ಯಶ್ ಅವರ ವಿಭಿನ್ನ ಲುಕ್ ಕಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಇತ್ತ ಸ್ಯಾಂಡಲ್‌ವುಡ್‌ನಲ್ಲಿ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ನಟಿ ರಿಷಿಕಾ ಸಿಂಗ್ ಅವರು ಯಶ್ ಮತ್ತು ಟಾಕ್ಸಿಕ್ ಟ್ರೇಲರ್ ವಿರುದ್ಧ ಹರಿಹಾಯ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಕಂಟ್ರೋವರ್ಸಿಗೆ ಕಾರಣವಾಗಿದೆ.
ಯಶ್‌ಗೆ ನೇರವಾಗಿ ಸವಾಲು ಹಾಕಿದ ರಿಷಿಕಾ ಸಿಂಗ್
ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ಹಾಗೂ ನಟ ಆದಿತ್ಯ ಅವರ ಸಹೋದರಿಯಾಗಿರುವ ನಟಿ ರಿಷಿಕಾ ಸಿಂಗ್, ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಐ ಆಮ್ ಟಾಕ್ಸಿಕ್ ಶೀರ್ಷಿಕೆಯಡಿ ವಿಡಿಯೋ ಮಾಡಿ ಯಶ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಟ್ರೇಲರ್‌ನಲ್ಲಿ ಯಶ್ ಅವರು ನಗ್ನವಾಗಿ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿರುವ ಅವರು, ಯಶ್‌ಗೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸುವುದಾಗಿ ನೇರ ಎಚ್ಚರಿಕೆ ನೀಡಿದ್ದಾರೆ.
ವಿಡಿಯೋದಲ್ಲಿ ಅತ್ಯಂತ ತೀಕ್ಷ್ಣವಾಗಿ ಮತ್ತು ಪಂಚಿಂಗ್ ಶೈಲಿಯಲ್ಲಿ ಮಾತನಾಡಿರುವ ರಿಷಿಕಾ, ಹೆಣ್ಣುಮಕ್ಕಳಿಗೆ ಅಂದ ಇದ್ದರೆ ಚಂದ, ಗಂಡುಮಕ್ಕಳಿಗೆ ಮರ್ಯಾದೆ ಇದ್ದರೆ ಚಂದ ಕಂದ. ಇದೇನು ಪ್ಯಾಂಟ್ ಬಿಟ್ಟುಕೊಂಡು ಆಗಿಬಿಟ್ಟಿದ್ದೀಯಾ ಮಂಗ? ಮನೆಯಲ್ಲಿ ಹೆಂಡತಿ ಇದ್ದಾಳೆ, ಇದೇನು ಹೀರೋಯಿನ್‌ಗಳ ಜೊತೆ ನಿನ್ನ ಚಕ್ಕಂದ ಕಂದ? ನನಗಂತೂ ಇಷ್ಟ ಆಗಲಿಲ್ಲ ನಿನ್ನ ಹೊಸ ಗಂಧ. ನಿನಗೂ ಹೆಣ್ಣುಮಗಳಿದ್ದಾಳೆ, ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ? ಹೆಣ್ಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರ ಜಾಗ ಖಾಲಿ ಮಾಡ್ಸಿಬಿಡ್ತೀವಿ ಕರ್ನಾಟಕದಿಂದ ಎಂದು ಆಕ್ರೋಶ ಹೊರಹಾಕಿದ್ದಾರೆ.
ನೆಟ್ಟಿಗರ ಹಾಗೂ ಯಶ್ ಅಭಿಮಾನಿಗಳ ತೀವ್ರ ಆಕ್ರೋಶ
ರಿಷಿಕಾ ಸಿಂಗ್ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಹಾಗೂ ನೆಟ್ಟಿಗರು ಅವರ ವಿರುದ್ಧ ತೀವ್ರವಾಗಿ ತಿರುಗಿಬಿದ್ದಿದ್ದಾರೆ. ಸಿನಿಮಾದಲ್ಲಿ ಅಭಿನಯಿಸಿದ ನಟಿಯರಿಗೇ ಇಲ್ಲದ ಅಭ್ಯಂತರ ನಿಮಗೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ನಟಿಯರು ವೃತ್ತಿಪರವಾಗಿ, ಸಂಭಾವನೆ ಪಡೆದು ತಮ್ಮ ಮಿತಿಗೆ ಒಳಪಟ್ಟು ನಟಿಸಿದ್ದಾರೆ. ಸ್ವತಃ ಆ ನಟಿಯರೇ ವೇದಿಕೆ ಮೇಲೆ ಬಂದು ಯಶ್ ಜೊತೆ ನಟಿಸಿದ್ದು ಖುಷಿ ನೀಡಿದೆ ಎಂದು ಹೇಳಿರುವಾಗ, ಇವರೇಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಫ್ಯಾನ್ಸ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ರಿಷಿಕಾ ಸಿಂಗ್ ಅವರು ಈ ಹಿಂದೆ ಸಿನಿಮಾಗಳಲ್ಲಿ ನಟಿಸಿದ್ದಾಗ ಧರಿಸಿದ್ದ ಬಿಕಿನಿ ದೃಶ್ಯಗಳು, ಗ್ಲಾಮರಸ್ ಫೋಟೋಗಳು ಹಾಗೂ ಬೋಲ್ಡ್ ದೃಶ್ಯಗಳ ಸ್ಕ್ರೀನ್‌ಶಾಟ್‌ಗಳನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. ದುನಿಯಾ ವಿಜಯ್ ಜೊತೆ ಕಂಠೀರವ, ಕಳ್ಳ ಮಳ್ಳ ಸುಳ್ಳ, ಬೆಂಕಿ ಬಿರುಗಾಳಿ, ತುಂಟರು ಮುಂತಾದ ಸಿನಿಮಾಗಳಲ್ಲಿ ನೀವು ನಟಿಸಿದ ದೃಶ್ಯಗಳು ನೆನಪಿಲ್ಲವೇ? ಇದು ನಿಮ್ಮ ಸಂಸ್ಕಾರವೇ ಎಂದು ಫ್ಯಾನ್ಸ್ ಮರುಪ್ರಶ್ನೆ ಹಾಕಿ ಟ್ರೋಲ್ ಮಾಡುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನ ಪ್ರಭಾವಿ ಸಿನಿಮಾ ಕುಟುಂಬದಿಂದ ಬಂದ ರಿಷಿಕಾ ಸಿಂಗ್, ‘ಕಂಠೀರವ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ನಂತರ ‘ಕಳ್ಳ ಮಳ್ಳ ಸುಳ್ಳ’ ಸಿನಿಮಾದ ಹಾಡೊಂದರಲ್ಲಿ ಬೋಲ್ಡ್ ಆಗಿ ಅಭಿನಯಿಸಿ ಗಮನ ಸೆಳೆದಿದ್ದರು. ಜೊತೆಗೆ ಕನ್ನಡದ ಮೊದಲ ‘ಬಿಗ್ ಬಾಸ್’ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿದ್ದರು. ಪ್ರಸ್ತುತ ಚಿತ್ರರಂಗದಿಂದ ಕೊಂಚ ದೂರವಿರುವ ಅವರು, ಯಶ್ ವಿರುದ್ಧ ನೀಡಿರುವ ಈ ಹೇಳಿಕೆಯಿಂದಾಗಿ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅಭಿಮಾನಿಗಳು ಹಾಗೂ ನೆಟ್ಟಿಗರ ನಡುವೆ ಈ ವಿಷಯವಾಗಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಈ ವಿವಾದಕ್ಕೆ ನಟ ಯಶ್ ಅಥವಾ ಟಾಕ್ಸಿಕ್ ಚಿತ್ರತಂಡ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.







