ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ 133 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು ಸೇರಿದಂತೆ 750ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ದುರಂತದಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಟಿಬೆಟ್ ಗಡಿಯಲ್ಲಿರುವ ನೇಪಾಳದ ರುಸುವಾ ಜಿಲ್ಲೆಯಲ್ಲಿ ಭೋಟೆ ಕೋಶಿ ನದಿಗೆ ದಿಢೀರ್ ಪ್ರವಾಹ ಬಂದಿದ್ದು, ಇದರ ಪರಿಣಾಮ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲೂ ಭಾರಿ ಹಾನಿ ಸಂಭವಿಸಿದೆ.
ಕೆಸರು, ಕಲ್ಲುಗಳೊಂದಿಗೆ ನುಗ್ಗಿದ ಪ್ರವಾಹ
ಟಿಬೆಟ್ ಗಡಿಯಿಂದ ರಭಸವಾಗಿ ನುಗ್ಗಿದ ಕೆಸರುಮಿಶ್ರಿತ ಪ್ರವಾಹದ ನೀರು ಹಿಮಾಲಯದ ತಪ್ಪಲಿನ ಹಲವು ಗ್ರಾಮಗಳಿಗೆ ನುಗ್ಗಿ ಮನೆಗಳು ಹಾಗೂ ಇತರ ಕಟ್ಟಡಗಳಿಗೆ ಹಾನಿ ಮಾಡಿದೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯ ಮಾಹಿತಿಯ ಪ್ರಕಾರ, 291 ವಿದೇಶಿ ಪ್ರವಾಸಿಗರು ಹಾಗೂ 93 ನೇಪಾಳಿ ಪ್ರಜೆಗಳು ಸೇರಿದಂತೆ ಕನಿಷ್ಠ 384 ಯಾತ್ರಿಕರು ಪ್ರವಾಹಬಾಧಿತ ಪ್ರದೇಶದಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ನಾಪತ್ತೆಯಾದವರಲ್ಲಿ ಭಾರತ, ಅಮೆರಿಕ, ಮಲೇಷ್ಯಾ, ಬ್ರಿಟನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನೆದರ್ಲೆಂಡ್ಸ್ ಸೇರಿದಂತೆ ಹಲವು ದೇಶಗಳ ಪ್ರವಾಸಿಗರು ಸೇರಿದ್ದಾರೆ. ಇವರಲ್ಲಿ ಬಹುತೇಕರು ಪ್ರವಾಸ ಆಯೋಜಕ ಸಂಸ್ಥೆಗಳ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು ಎನ್ನಲಾಗಿದೆ.
ಪ್ರವಾಹದ ಭೀಕರ ದೃಶ್ಯಗಳು ವೈರಲ್
ನೇಪಾಳ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೊಗಳಲ್ಲಿ ಪ್ರವಾಹದ ಭೀಕರತೆ ಕಂಡುಬಂದಿದೆ. ಕೆಸರು, ಬಂಡೆಗಳು ಹಾಗೂ ಕಟ್ಟಡಗಳ ಅವಶೇಷಗಳನ್ನು ಹೊತ್ತು ರಭಸವಾಗಿ ಹರಿಯುತ್ತಿರುವ ನೀರು ಭೋಟೆ ಕೋಶಿ ನದಿ ಪಾತ್ರದಲ್ಲಿ ಅಪಾರ ಹಾನಿ ಉಂಟುಮಾಡಿದೆ.
ದಟ್ಟ ಮಂಜಿನ ನಡುವೆ ಜನರು ಜೀವ ಉಳಿಸಿಕೊಳ್ಳಲು ಓಡುತ್ತಿರುವ ದೃಶ್ಯಗಳೂ ವಿಡಿಯೊಗಳಲ್ಲಿ ಕಂಡುಬಂದಿವೆ.
ಕೆಲವೇ ಕ್ಷಣಗಳಲ್ಲಿ ಪ್ರವಾಹವು ನೇಪಾಳದ ಹಲವು ಪ್ರದೇಶಗಳಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದು, ನಾಪತ್ತೆಯಾಗಿರುವ ಯಾತ್ರಾರ್ಥಿಗಳಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ.







