ಸಪ್ತಪರ್ಣಿ ಮರದಲ್ಲಿದೆ ಆಯುರ್ವೇದ ಔಷಧದ ಗುಣ… ಆಟಿ ಅಮವಾಸ್ಯೆಗೆ ಪಾಲೆ(ಹಾಲೆ) ಮರದ ಕಷಾಯ
ಮಂಗಳೂರು, ಜುಲೈ 19: ತುಳುನಾಡಿನ ತುಳು ಪಂಚಾಂಗದ ಪ್ರಕಾರ ತುಳುವರಿಗೆ ಪಗ್ಗು ತಿಂಗಳಲ್ಲಿ ವರ್ಷ ಪ್ರಾರಂಭವಾದರೆ ಸುಗ್ಗಿ ತಿಂಗಳು ವರ್ಷದ ಕೊನೆಯ ತಿಂಗಳು. ತುಳುನಾಡಿನ ಮೊದಲ ಹಬ್ಬ ಶುರುವಾಗುವುದು ಆಟಿ ಅಮವಾಸ್ಯೆಯ ದಿನ. ಆವತ್ತು ಬೆಳಿಗ್ಗೆ ಪಾಲೆ(ಹಾಲೆ) ಯ ಮರದ ಕಷಾಯ ಕುಡಿದು ಆನಂತರ ಆಟಿ ಅಮವಾಸ್ಯೆ ತೀರ್ಥ ಸ್ನಾನ ಮಾಡುವುದು ತುಳುನಾಡಿನ ವಿಶೇಷ.
ತುಳುನಾಡಿನಲ್ಲಿ ಆಟಿ ತಿಂಗಳು ಎಂದರೆ ಹೊರಗೆ ಬಿಡದೇ ಸುರಿಯುವ ಜಡಿಮಳೆ. ವಿಪರೀತ ಮಳೆಯಿಂದಾಗಿ ಕ್ರಿಮಿ ಕೀಟಗಳ ಸಂತತಿ ಜಾಸ್ತಿಯಾಗಿ ರೋಗ ರುಜಿನಗಳು ಈ ಸಮಯದಲ್ಲಿ ಹೆಚ್ಚು. ಮಳೆಗಾಲದಲ್ಲಿ ಬರುವ ರೋಗ ರುಜಿನಗಳನ್ನು ನಿಯಂತ್ರಣದಲ್ಲಿ ಇಡಲು ತುಳುನಾಡಿನಲ್ಲಿ ಆಟಿ ಅಮವಾಸ್ಯೆಯಂದು ಮಾತ್ರ ಹಾಲೆ (ಪಾಲೆ) ಕಷಾಯ ಕುಡಿಯುವ ಪದ್ದತಿ ಹಿಂದಿನಿಂದಲೂ ಬೆಳೆದು ಬಂದಿದೆ. ಆ ದಿನ ಪಾಲೆ ಮರ ಎಲ್ಲಾ ರೋಗ ನಿವಾರಣೆ ಮಾಡುವ ದಿವ್ಯ ಔಷದಿಯಿಂದ ಕೂಡಿರುತ್ತದೆ ಎನ್ನುವ ನಂಬಿಕೆ ತುಳುವರದು.

ಹಾಗಾಗಿ ಅಂದು ಸೂರ್ಯೋದಯಕ್ಕೆ ಮೊದಲೇ ಎದ್ದು ಪಾಲೆ ಮರ (ಹಾಲೆ ಮರ) ದ ಕೆತ್ತೆಯನ್ನು ಕಲ್ಲಿನಿಂದ ಜಜ್ಜಿ ಆ ಮರದ ತೊಗಟೆಯನ್ನು ತೆಗೆದು ಬರಬೇಕು. ತೊಗಟೆಯನ್ನು ತೆಗೆಯುವಾಗ ಯಾವುದೇ ಕಾರಣಕ್ಕೂ ಕಬ್ಬಿಣದ ಕತ್ತಿಯನ್ನು ತಾಗಿಸಬಾರದು. ಬಳಿಕ ಅದನ್ನು ಜಜ್ಜಿ, ಅದರ ರಸಕ್ಕೆ ಕಾಳು ಮೆಣಸು ಬೆಳ್ಳುಳ್ಳಿ ಇತ್ಯಾದಿ ವಸ್ತುಗಳನ್ನು ಸೇರಿಸಿ ಮನೆಮಂದಿಯೆಲ್ಲರೂ ಆರೋಗ್ಯವರ್ಧಕ ಪಾಲೆಯ ಅತಿ ಕಹಿಯಾದ ರಸವನ್ನು ಕುಡಿಯುತ್ತಾರೆ. ನಂತರ ತೆಂಗಿನ ಕಾಯಿ ತುರಿ ಹಾಕಿದ ಗಂಜಿಯನ್ನು ಸೇವಿಸುತ್ತಾರೆ.
ಪಾಲೆ ಕೆತ್ತೆಯ ರಸವನ್ನು ಕುಡಿದರೆ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ಹತ್ತಿರ ಸುಳಿಯುವುದಿಲ್ಲ ಎನ್ನುವ ನಂಬಿಕೆ ಇದೆ. ಆಹಾರ ಸೇವನೆಗೆ ಮೊದಲು ಖಾಲಿ ಹೊಟ್ಟೆಯಲ್ಲಿ ಪಾಲೆ ಕಷಾಯ ಸೇವಿಸುವುದರಿಂದ ಅನೇಕ ಬಗೆಯ ಔಷಧಿಗಳು ನಮ್ಮ ಶರೀರಕ್ಕೆ ಸೇರುತ್ತದೆ ಎಂಬ ಬಲವಾದ ನಂಬಿಕೆ ಇಲ್ಲಿದೆ.
ಆಯುರ್ವೇದ ಶಾಸ್ತ್ರದಲ್ಲಿ ಕೂಡ ಪಾಲೆ ಕೆತ್ತೆಯ ಔಷಧೀಯ ಗುಣಗಳ ಬಗ್ಗೆ ಉಲ್ಲೇಖವಿರುವುದನ್ನು ನಾವು ಕಾಣಬಹುದು. ಆಯುರ್ವೇದದಲ್ಲಿ ಪಾಲೆ ಮರವನ್ನು ಸಪ್ತಪರ್ಣ ಅಥವಾ ಸಪ್ತಪರ್ಣಿ ಎನ್ನುತ್ತಾರೆ. ಈ ಮರದ ಎಲೆಗಳಲ್ಲಿ ಏಳು ಎಲೆಗಳಿರುವ ಕಾರಣ ಈ ಹೆಸರು ಬಂದಿರಬಹುದು ಎಂದು ನಂಬಲಾಗಿದೆ. ಆಯುರ್ವೇದ ಔಷಧಿಗಳಲ್ಲಿ ಪಾಲೆ ರಸ ಬಳಕೆಯಾಗುತ್ತಿದ್ದು, ಇದು ಹಲವು ಕಾಯಿಲೆಗಳನ್ನು ಗುಣಪಡಿಸುವ ಔಷಧೀಯ ಗುಣ ಹೊಂದಿದ್ದು, ವೈರಾಣು ನಿರೋಧಕ, ಕ್ಯಾನ್ಸರ್ ನಿರೋಧಕ ಮತ್ತು ಕ್ಯಾನ್ಸರ್ ಗಡ್ಡೆಯ ಗಾತ್ರ ಕಡಿಮೆ ಮಾಡುವ ಗುಣ, ಯಕೃತ್ ರಕ್ಷಿಸುವ ಗುಣ, ಅತಿಸಾರ ನಿರೋಧಕ, ಹೊಟ್ಟೆನೋವು, ವಾತ, ಸಂಧಿನೋವು, ಮಲೇರಿಯಾ, ಜ್ವರ, ಹುಣ್ಣು ನಿವಾರಣಾ ಗುಣ ಇದರಲ್ಲಿದೆ.

ಬ್ರಾಹ್ಮಿ ಮುಹೂರ್ತದಲ್ಲಿ ಮರಗಳಲ್ಲಿ ಉದ್ದೇಶಿತ ಗುಣಗಳು ಹೆಚ್ಚಿಗೆ ಇರುವ ಹಿನ್ನಲೆಯಲ್ಲಿ ಮುಂಜಾನೆ ಬೇಗನೆ ಎದ್ದು ತೊಗಟೆ ಸಂಗ್ರಹಿಸುವ ಕ್ರಮ ಚಾಲ್ತಿಗೆ ಬಂದಿರಬಹುದು ಎಂದು ಹೇಳಲಾಗಿದೆ. ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಬ್ರಾಹ್ಮೀ ಮುಹೂರ್ತದಲ್ಲಿ ಸೂರ್ಯೋದಯಕ್ಕೆ ಅಭಿಮುಖವಾಗಿ ಹೋಗಿ ಪಾಲೆ ಮರದ ಕೆತ್ತೆಯನ್ನು ಜಜ್ಜಿ ರಸವನ್ನು ತೆಗೆಯಬೇಕು ಮತ್ತು ಈ ರಸವನ್ನು ವ್ಯಕ್ತಿಯೊಬ್ಬ ಗರಿಷ್ಠ 24 ಮಿ.ಲೀ ಸೇವಿಸಬಹುದು. ಈ ರಸವನ್ನು ಕುದಿಸಿ ಕಷಾಯ ಮಾಡುವುದಾದರೆ ಗರಿಷ್ಠ 50 ಮಿ.ಲೀ. ಸೇವಿಸಬಹುದು. ಬೇಕಿದ್ದರೆ ಜೀರಿಗೆ, ಬೆಳ್ಳುಳ್ಳಿ, ಅರಶಿನವನ್ನು ಕೂಡ ಮಿಶ್ರ ಮಾಡಬಹುದು ಎಂದು ಉಲ್ಲೇಖವಿದೆ.
ಆದರೆ ಹಾಲೆ ಮರದ ಕೆತ್ತೆಯ ಬದಲು ಬೇರೊಂದು ಮರದ ಕೆತ್ತೆಯನ್ನು ತಂದು ಜೀವಕ್ಕೆ ಅಪಾಯ ತಂದುಕೊಳ್ಳುವ ಪ್ರಕರಣಗಳು ಕೂಡ ಈ ಸಮಯದಲ್ಲಿ ವರದಿಯಾಗುತ್ತದೆ.
ಕತ್ತಲೆಯಲ್ಲಿ ಸರಿಯಾಗಿ ಗುರುತಿಸಲು ಸಾಧ್ಯವಾಗದೆ ಹಾಲೆ ಮರದಂತೆ ಹೋಲುವ ಕಾಸರ್ಕ (ಕಾಸಾನು) ಮರದ ತೊಗಟೆಯ ರಸ ಕುಡಿದು ಕೆಲವರು ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಆದುದರಿಂದ ಹಿಂದಿನ ದಿನವೇ ಹಾಲೆ ಮರದ ಎಲೆಯನ್ನು ಸ್ಪಷ್ಟವಾಗಿ ಗುರುತಿಸಿ ಮರುದಿನ ಕೆತ್ತೆಯನ್ನು ತೆಗೆಯುವುದು ಉತ್ತಮ.

ಕೊರೊನಾ ಸೋಂಕಿಗೆ ತತ್ತರಿಸಿರುವ ಈ ಸಮಯದಲ್ಲಿ ಎಲ್ಲರೂ ಪಾಲೆ ಮರದ ಕೆತ್ತೆಯ ಕಷಾಯ ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳೋಣ. ಜೊತೆಗೆ ವಿಶ್ವಕ್ಕೆ ಬಂದಿರುವ ಮಹಾಮಾರಿಯನ್ನು ಆಟಿಕೆಲೆಂಜ ದೂರ ಓಡಿಸಿ ನೆಮ್ಮದಿಯ ಬದುಕನ್ನು ತರಲಿ ಎಂದು ಅರಿಕೆ ಮಾಡೋಣ.








