ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಬಸ್ ಪ್ರಯಾಣ ಪಡೆಯಲು ಪ್ರತಿ ಬಾರಿ ಆಧಾರ್ ಕಾರ್ಡ್ ತೋರಿಸುವ ಅಗತ್ಯವನ್ನು ತೆಗೆದುಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಯೋಜನೆಯ ದುರ್ಬಳಕೆಯನ್ನು ತಡೆಯುವ ಉದ್ದೇಶದಿಂದ ಸುಮಾರು ₹250 ಕೋಟಿ ವೆಚ್ಚದಲ್ಲಿ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಸರ್ಕಾರ ಟೆಂಡರ್ ಕರೆದಿದೆ ಎಂದು ವರದಿಯಾಗಿದೆ.ಈ ಸ್ಮಾರ್ಟ್ ಕಾರ್ಡ್‌ಗಳ ಮೂಲಕ ಫಲಾನುಭವಿಗಳ ಗುರುತನ್ನು ಸುಲಭವಾಗಿ ಪರಿಶೀಲಿಸಿ, ಉಚಿತ ಪ್ರಯಾಣದ ಸೌಲಭ್ಯವನ್ನು ನೀಡುವ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ.
ಸ್ಮಾರ್ಟ್ ಕಾರ್ಡ್ ಪಡೆಯಲು ದಾಖಲೆಗಳು ಅಗತ್ಯ
ಸ್ಮಾರ್ಟ್ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಮೊದಲ ಹಂತದಲ್ಲಿ BMTC ಪ್ರಯಾಣಿಕರಿಗೆ ಕಾರ್ಡ್
ಆರಂಭಿಕ ಹಂತದಲ್ಲಿ ಬೆಂಗಳೂರಿನ BMTC ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ, ನಂತರ ಹಂತ ಹಂತವಾಗಿ KSRTC ಸೇರಿದಂತೆ ಇತರ ಸಾರಿಗೆ ನಿಗಮಗಳ ಫಲಾನುಭವಿಗಳಿಗೂ ವಿತರಿಸುವ ಯೋಜನೆ ಇದೆ ಎಂದು ವರದಿಯಾಗಿದೆ.ರಾಜ್ಯದಲ್ಲಿ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಒಂದು ಕೋಟಿಗೂ ಅಧಿಕವಾಗಿದ್ದು, ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೂ ಸ್ಮಾರ್ಟ್ ಕಾರ್ಡ್ ನೀಡುವ ಯೋಜನೆ ಇದೆ ಎಂದು ತಿಳಿಸಲಾಗಿದೆ.
‘ಟು ಇನ್ ಒನ್’ ಕಾರ್ಡ್ ಆಗುವ ಸಾಧ್ಯತೆ
ಈ ಸ್ಮಾರ್ಟ್ ಕಾರ್ಡ್‌ಗಳನ್ನು ಬಸ್ ಪ್ರಯಾಣದ ಜೊತೆಗೆ ‘ನಮ್ಮ ಮೆಟ್ರೋ’ ಪ್ರಯಾಣಕ್ಕೂ ಬಳಸಲು ಅವಕಾಶ ಕಲ್ಪಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಹೀಗಾಗಿ, ಬಸ್ ಮತ್ತು ಮೆಟ್ರೋ ಎರಡಕ್ಕೂ ಬಳಸಬಹುದಾದ ಏಕೀಕೃತ ಕಾರ್ಡ್ ವ್ಯವಸ್ಥೆ ರೂಪುಗೊಳ್ಳುವ ಸಾಧ್ಯತೆಯಿದೆ.
ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಅರ್ಹ ಫಲಾನುಭವಿಗಳ ಗುರುತಿನ ಪರಿಶೀಲನೆ ಸುಲಭವಾಗುವುದರ ಜೊತೆಗೆ, ಅನರ್ಹರು ಶಕ್ತಿ ಯೋಜನೆಯ ಸೌಲಭ್ಯ ಪಡೆಯುವುದನ್ನು ತಡೆಯುವ ಉದ್ದೇಶವೂ ಸರ್ಕಾರ ಹೊಂದಿದೆ ಎಂದು ವರದಿಯಾಗಿದೆ.







