ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಗಳು ಎಷ್ಟೊಂದು ಕಾರ್ಯನಿರತರಾಗಿದ್ದಾರೆ ಎಂದರೆ, ಅವರದೇ ಪಕ್ಷದ ಪ್ರಭಾವಿ ನಾಯಕರಿಗೂ ಅವರು ಫೋನ್ನಲ್ಲಿ ಸಿಗುತ್ತಿಲ್ಲವಂತೆ! ಹೌದು, ಇಂತಹದೊಂದು ಅಚ್ಚರಿಯ ಹೇಳಿಕೆಯನ್ನು ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ್ದಾರೆ. ದಿನಕ್ಕೆ ಬರೋಬ್ಬರಿ 18 ಗಂಟೆಗಳ ಕಾಲ ಜನರ ಸೇವೆಗಾಗಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮುಖ್ಯಮಂತ್ರಿಗಳ ಬಿಡುವಿಲ್ಲದ ವೇಳಾಪಟ್ಟಿಯೇ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ವಿಳಂಬಕ್ಕೆ ಅಸಲಿ ಕಾರಣ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಸಿಎಂ ಬಿಜಿನೆಸ್ ಸೀಕ್ರೆಟ್ ಬಿಚ್ಚಿಟ್ಟ ಹೆಬ್ಬಾಳ್ಕರ್
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಸಿಎಂ ಅವರು ಅಹೋರಾತ್ರಿ ಕೆಲಸ ಮಾಡುತ್ತಿದ್ದಾರೆ. ನಾನು ಕೆಲಸದ ನಿಮಿತ್ತ ಹಲವು ಬಾರಿ ಅವರಿಗೆ ಫೋನ್ ಮಾಡುತ್ತೇನೆ. ಆದರೆ ಅವರು ಎಷ್ಟೊಂದು ಬ್ಯುಸಿಯಾಗಿರುತ್ತಾರೆ ಎಂದರೆ, ನನ್ನ ಫೋನ್ ಕರೆಗಳನ್ನು ಸ್ವೀಕರಿಸಲು ಅವರಿಗೂ ಸಮಯವಿರುವುದಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಇಡೀ ರಾಜ್ಯದ ಜವಾಬ್ದಾರಿ ಅವರ ಮೇಲಿದೆ. ಹೀಗಿರುವಾಗ ಸಣ್ಣಪುಟ್ಟ ಕೆಲಸಗಳಿಗೆ ಅವರು ಲಭ್ಯವಾಗುವುದು ಕಷ್ಟ ಎಂದು ಹೆಬ್ಬಾಳ್ಕರ್ ಹೇಳಿದರು.
ಗೃಹಲಕ್ಷ್ಮಿ ಹಣ ವಿಳಂಬಕ್ಕೆ ಇಲ್ಲಿದೆ ಕಾರಣ
ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ ಎಂಬ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದಿದ್ದಾರೆ. ಹಣಕಾಸು ಇಲಾಖೆಯ ಕಾರ್ಯದರ್ಶಿ ರಿತೇಶ್ ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಈ ಹಿಂದೆ ನಾನು ಸಚಿವೆಯಾಗಿದ್ದಾಗ ಎಷ್ಟು ಕಾಳಜಿಯಿಂದ ಕೆಲಸ ಮಾಡಿದ್ದೇನೋ, ಈಗಿನ ಅಧಿಕಾರಿಗಳೂ ಅಷ್ಟೇ ವೇಗವಾಗಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಆಡಳಿತಾತ್ಮಕ ಕಾರಣಗಳಿಂದಾಗಿ ಹಣ ಬಿಡುಗಡೆಯ ದಿನಾಂಕಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿರಬಹುದು ಅಷ್ಟೇ, ಫಲಾನುಭವಿಗಳ ಖಾತೆಗೆ ಹಣ ಸೇರುವುದು ಖಚಿತ ಎಂದು ಭರವಸೆ ನೀಡಿದರು.
ಕುಡಿಯುವ ನೀರಿನ ಯೋಜನೆಯ ಬಗ್ಗೆ ಮಾತನಾಡಿದ ಅವರು, ಸುಮಾರು 12 ಹಳ್ಳಿಗಳಿಗೆ ಶುದ್ಧೀಕರಿಸಿದ ಫಿಲ್ಟರ್ ನೀರು ಒದಗಿಸುವ ಕನಸು ನನ್ನದಾಗಿದೆ. ಈ ಯೋಜನೆಗಾಗಿ ರಿಸರ್ವಾಯರ್ ಅಂದರೆ ನೀರು ಸಂಗ್ರಹಣಾ ಘಟಕ ನಿರ್ಮಿಸಲು ಕೆಲವು ರೈತರು ಜಮೀನು ನೀಡಲು ಹಿಂಜರಿಯುತ್ತಿದ್ದಾರೆ. ಒಂದು ವೇಳೆ ರೈತರು ಸಹಕಾರ ನೀಡದಿದ್ದರೆ, ನಾವು ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ನೇರವಾಗಿ ಹೊಳೆಯಿಂದಲೇ ನೀರನ್ನು ಪಂಪ್ ಮಾಡುವ ಮೂಲಕ ಗ್ರಾಮಗಳಿಗೆ ನೀರು ತಲುಪಿಸುತ್ತೇವೆ. ಈ ಯೋಜನೆಯನ್ನು ನೂರಕ್ಕೆ ನೂರರಷ್ಟು ಪೂರ್ಣಗೊಳಿಸಿಯೇ ಸಿದ್ಧ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.







