ನವದೆಹಲಿ: ಪ್ರತಿಭಟನೆಯ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ಸುಪ್ರೀಂ ಶಾಕ್ ನೀಡಿದೆ. ಶಾಂತಿ ಪಾಲನೆಯ ಭರವಸೆ ನೀಡಿ ಬಾಂಡ್ ಸಲ್ಲಿಸಿದ್ದರೂ, ಅದನ್ನು ಉಲ್ಲಂಘಿಸಿ ಜಂತರ್ ಮಂತರ್ ನಲ್ಲಿ ಅಕ್ರಮವಾಗಿ ಜಮಾಯಿಸಲು ಯತ್ನಿಸಿದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ನ್ಯಾಯಮೂರ್ತಿ ಪ್ರಸಾದ್ ಅವರಿದ್ದ ಪೀಠವು ಅತ್ಯಂತ ಕಠಿಣ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯದ ರೌದ್ರಾವತಾರ ಮತ್ತು ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಿಜೆಪಿ ನಾಯಕರ ಪರ ವಕೀಲರು ಅಂತಿಮವಾಗಿ ತಮ್ಮ ಅರ್ಜಿಯನ್ನೇ ಹಿಂಪಡೆದು ಪಲಾಯನ ಮಾಡಿದ್ದಾರೆ.
ನೀವು ಪ್ರಬುದ್ಧ ಮಿಲೇನಿಯಲ್ ಗಳು ಮಕ್ಕಳಲ್ಲ
ವಿಚಾರಣೆ ವೇಳೆ ಅರ್ಜಿದಾರರ ವಯಸ್ಸನ್ನು ಗಮನಿಸಿದ ನ್ಯಾಯಾಲಯ, ಇವರು 27 ಮತ್ತು 31 ವರ್ಷದ ಪ್ರಬುದ್ಧ ವ್ಯಕ್ತಿಗಳು ಎಂಬ ಅಂಶವನ್ನು ಎತ್ತಿ ತೋರಿಸಿತು. ನೀವೇನು ಜೆನ್ ಝಿ ತಲೆಮಾರಿನ ಸಣ್ಣ ಮಕ್ಕಳಲ್ಲ, ಬದಲಿಗೆ ಸಮಾಜದ ಜವಾಬ್ದಾರಿಯುತ ಮಿಲೇನಿಯಲ್ ಗಳು. ಆರಂಭದಲ್ಲಿ ಇದು ಕೇವಲ ವಿದ್ಯಾರ್ಥಿಗಳ ಪ್ರತಿಭಟನೆಯಂತೆ ಕಂಡರೂ, ಈಗ ಇದರ ಉದ್ದೇಶ ಮತ್ತು ಇದರ ಹಿಂದೆ ಅಡಗಿರುವ ಲೆಕ್ಕಾಚಾರಗಳು ಬದಲಾಗಿರುವಂತೆ ಕಾಣುತ್ತಿದೆ. ವ್ಯಕ್ತಿಗಳೇನೋ ಅವರೇ ಇದ್ದಾರೆ, ಆದರೆ ಅಸಲಿ ಅಜೆಂಡಾ ಏನು ಎಂಬುದು ಈಗ ಅನುಮಾನಾಸ್ಪದವಾಗಿದೆ ಎಂದು ನ್ಯಾಯಮೂರ್ತಿಗಳು ಕಿಡಿಕಾರಿದ್ದಾರೆ.
ವಿದೇಶಿ ಮಾದರಿಯ ಹಿಂಸಾಚಾರದ ಕರಿನೆರಳು
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿಗಳ ಹೆಸರಿನ ಹಿಂಸಾಚಾರವನ್ನು ಉಲ್ಲೇಖಿಸಿದ ಹೈಕೋರ್ಟ್, ಪ್ರತಿಭಟನೆಗಳು ಹೇಗೆ ಭೀಕರ ರೂಪ ಪಡೆಯುತ್ತವೆ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿತು. ವಿದೇಶಗಳಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಆರಂಭವಾದ ಸಣ್ಣ ಕಿಡಿಗಳು ಹೇಗೆ ಕಟ್ಟಡಗಳಿಗೆ ಬೆಂಕಿ ಹಚ್ಚುವ ಮತ್ತು ಸಾರ್ವಜನಿಕ ಆಸ್ತಿ ನಾಶ ಮಾಡುವ ಹಂತಕ್ಕೆ ತಲುಪಿವೆ ಎಂಬುದನ್ನು ನಾವು ನೋಡಿದ್ದೇವೆ. ನೀವು ಪ್ರತಿಭಟನೆಯ ಮುಂಚೂಣಿಯಲ್ಲಿ ನಿಂತು ಬ್ಯಾರಿಕೇಡ್ ಮುರಿದಾಗ, ನಿಮ್ಮ ಹಿಂದೆ ಬರುವ ನೂರಾರು ಜನರನ್ನು ನಿಯಂತ್ರಿಸಲು ಸಾಧ್ಯವೇ? ಆ ಜನಸಂದಣಿಯಲ್ಲಿ ಸಮಾಜಘಾತುಕ ಶಕ್ತಿಗಳು ನುಸುಳಿ ಅನಾಹುತ ಸೃಷ್ಟಿಸಿದರೆ ಅದಕ್ಕೆ ಯಾರು ಹೊಣೆ ಎಂದು ನ್ಯಾಯಾಲಯ ಪ್ರಶ್ನಿಸಿತು.
ಬಾಂಡ್ ಉಲ್ಲಂಘನೆಗೆ ದಕ್ಕದ ಕ್ಷಮೆ
ಕೇವಲ ನಾಲ್ಕು ದಿನಗಳ ಹಿಂದಷ್ಟೇ 50 ಸಾವಿರ ರೂಪಾಯಿ ಮೌಲ್ಯದ ಶಾಂತಿ ಪಾಲನಾ ಬಾಂಡ್ ನೀಡಿ ಬಿಡುಗಡೆಯಾಗಿದ್ದ ನಾಯಕರು, ಅಕ್ಟೋಬರ್ 14 ರಂದು ಮತ್ತೆ ನಿರ್ಬಂಧಿತ ಪ್ರದೇಶದಲ್ಲಿ ಕಾನೂನು ಉಲ್ಲಂಘಿಸಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. ನೀವೇ ನೀಡಿದ ಬಾಂಡ್ ಅನ್ನು ನೀವೇ ಮುರಿದ ಮೇಲೆ ಆಡಳಿತಾಧಿಕಾರಿಗಳು ನಿಮ್ಮನ್ನು ಜೈಲಿಗಟ್ಟದೆ ಇನ್ನೇನು ಮಾಡಬೇಕು ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಹೈಕೋರ್ಟ್ ನ ಈ ಖಡಕ್ ನಿಲುವಿನಿಂದಾಗಿ ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯುವ ಮೂಲಕ ಸಿಜೆಪಿ ನಾಯಕರು ಕಾನೂನಿನ ಅಸ್ತ್ರಕ್ಕೆ ಶರಣಾಗಿದ್ದಾರೆ.






