ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಹಿರಿಯ ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೊತೆ ನಂಟಿರುವವರು ಇದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಇನ್ನು ಕೇವಲ 6 ತಿಂಗಳೊಳಗಾಗಿ ಈ ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸಿ ಆರೋಪಿಗಳನ್ನು ಜೈಲಿಗಟ್ಟಲಾಗುವುದು ಎಂದು ಘೋಷಿಸಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಯುವ ಘಟಕವಾದ ಮುಸ್ಲಿಂ ಯೂತ್ ಲೀಗ್ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇರಳದ ಯುವಜನರೊಂದಿಗೆ ಸಂವಾದ ನಡೆಸಿದ್ದು ತಮಗೆ ಅಪಾರ ಸಂತೋಷ ತಂದಿದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಆರ್ಎಸ್ಎಸ್ ಇತಿಹಾಸ ಓದಿ: ಕ್ವಿಟ್ ಇಂಡಿಯಾ ಚಳವಳಿಯಿಂದ ದೂರ ಉಳಿದು ತ್ರಿವರ್ಣ ಧ್ವಜ ವಿರೋಧಿಸಿದ್ದ ಸಂಘಟನೆ!
ಸಮಾವೇಶದಲ್ಲಿ ಬಿಜೆಪಿಯ ದ್ವೇಷ ಮತ್ತು ವಿಭಜನೆಯ ರಾಜಕಾರಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ಸಂಘಟನೆಯ ನೈಜ ಸಿದ್ಧಾಂತ ಹಾಗೂ ಅದರ ಹಿನ್ನೆಲೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಇಂದಿನ ಯುವಜನರು ಅದರ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಆರ್ಎಸ್ಎಸ್ ಭಾಗವಹಿಸದಿರುವುದು, ರಾಷ್ಟ್ರದ ಹೆಮ್ಮೆಯ ತ್ರಿವರ್ಣ ಧ್ವಜವನ್ನು ವಿರೋಧಿಸಿದ್ದು ಹಾಗೂ ಭಾರತದ ಸಂವಿಧಾನದ ಬಗ್ಗೆ ಮೊದಲಿನಿಂದಲೂ ಹೊಂದಿದ್ದ ವಿರೋಧದ ನಿಲುವುಗಳು ಆ ಸಂಘಟನೆಯ ನೈಜ ಇತಿಹಾಸವನ್ನು ಬಿಂಬಿಸುತ್ತವೆ. ಈ ಐತಿಹಾಸಿಕ ಸತ್ಯಗಳ ಬಗ್ಗೆ ಪ್ರತಿಯೊಬ್ಬ ಯುವ ಭಾರತೀಯನೂ ತಿಳಿದುಕೊಳ್ಳಲೇಬೇಕು ಎಂದು ಪ್ರತಿಪಾದಿಸಿದರು.
ಅಂಬೇಡ್ಕರ್ ಸಂವಿಧಾನವೇ ನಿರಂಕುಶಾಧಿಕಾರದ ವಿರುದ್ಧದ ರಕ್ಷಾಕವಚ
ಸಂವಿಧಾನದ ಶ್ರೇಷ್ಠತೆಯನ್ನು ಎತ್ತಿಹಿಡಿದ ಸಚಿವರು, ನಮ್ಮ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಖಾತರಿಪಡಿಸಿದೆ. ಜಾತ್ಯತೀತತೆಯು ನಮ್ಮ ಗಣರಾಜ್ಯದ ಮೂಲ ಆಶಯವಾಗಿದ್ದು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಿರಂಕುಶ ಅಧಿಕಾರದ ವಿರುದ್ಧ ನಮಗೆ ಅತ್ಯಂತ ಬಲವಾದ ರಕ್ಷಣೆಯನ್ನು ಸಂವಿಧಾನದ ಮೂಲಕ ನೀಡಿದ್ದಾರೆ ಎಂದು ಉಲ್ಲೇಖಿಸಿದರು. ಈ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ನಡೆಯುವ ಹೋರಾಟದ ನೇತೃತ್ವವನ್ನು ಯುವಜನರು ವಹಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು, ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮೈತ್ರಿಕೂಟವು ಈ ಮೌಲ್ಯಗಳನ್ನು ಮುಂದೆಯೂ ಎತ್ತಿಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.







