ಓ.. ಮೈ.. ಫ್ರೆಂಡ್… ನಮ್ಮ ಸ್ನೇಹವಿದು ಇರಲಿ ಶಾಶ್ವತ..
ಮಂಗಳೂರು, ಅಗಸ್ಟ್ 2: ಕೆಲವು ಸಂಬಂಧಗಳಿಗೆ ಈ ಭೂಮಿಯ ಮೇಲೆ ಎಂದೂ ಸಾವು ಇರುವುದಿಲ್ಲ- ಆ ಸಂಬಂಧವೇ ಗೆಳೆತನ. ಸ್ನೇಹವು ಗಡಿ, ಭಾಷೆ, ಜಾತಿ ಧರ್ಮ ಹೀಗೆ ಎಲ್ಲಾ ಕಟ್ಟುಪಾಡುಗಳನ್ನು ಮೀರಿದ ಪವಿತ್ರವಾದ ಸಂಬಂಧ. ಒಬ್ಬ ಪ್ರಾಣ ಸ್ನೇಹಿತ ಹತ್ತು ಸಾವಿರ ಸಂಬಂಧಿಕರಿಗೆ ಸಮಾನ ಎಂಬ ಮಾತೊಂದು ಸ್ನೇಹದ ಮಹತ್ವವನ್ನು ತಿಳಿಸುತ್ತದೆ. ಗೆದ್ದಾಗ ನಮ್ಮೊಡನೆ ಸಂತೋಷ ಹಂಚಿಕೊಂಡು, ಬಿದ್ದಾಗ ನಾನಿದ್ದೀನಿ ನಿನ್ನೊಡನೆ ಎಂದು ಧೈರ್ಯ ತುಂಬಿ ನಮ್ಮನ್ನು ಮೇಲಕ್ಕೆತ್ತುವ ಸ್ನೇಹಿತರು ನಿಜಕ್ಕೂ ದೇವರ ವರವೇ ಸರಿ.
ಒಬ್ಬ ಉತ್ತಮ ಸ್ನೇಹಿತ ಸಿಗಬೇಕಾದರೆ ನಾವು ಸಾಕಷ್ಟು ಅದೃಷ್ಟವಂತರಾಗಿರಬೇಕು. ನಿಜವಾದ ಸ್ನೇಹದಲ್ಲಿ ಎಂತಹ ಸಂದರ್ಭ ಎದುರಾದರೂ , ಅವರ ನಡುವಿನ ಬಾಂಧವ್ಯ ಎಂದೂ ಕೊನೆಯಾಗುವುದಿಲ್ಲ. ಅಮ್ಮನ ಮಮತೆ, ಅಪ್ಪನ ಕಾಳಜಿ, ಅಕ್ಕನ ಅಕ್ಕರೆ, ಅಣ್ಣನ ರಕ್ಷೆ, ತಮ್ಮನ ತರ್ಲೆ, ತಂಗಿಯ ಕೀಟಲೆ.. ಹೀಗೆ ಎಲ್ಲ ಸಂಬಂಧವನ್ನು ಒಂದೇ ಫ್ರೇಮ್ ನೊಳಗೆ ಹಿಡಿದಿಟ್ಟಿರುವ ಭಾವವೇ ನಿಜವಾದ ಗೆಳೆತನ..
ಅದೆಷ್ಟೋ ಬಾರಿ ನಾವು ನಗುವಿನ ಮುಖವಾಡ ಧರಿಸಿ ಲೋಕದ ಕಣ್ಣಿಗೆ ದುಃಖವನ್ನು ಮರೆಮಾಚಿ ನಟಿಸಬಹುದು. ಆದರೆ ಸ್ನೇಹಿತರು ಕಣ್ಣೆವೆಯಲ್ಲಿ ಬತ್ತಿ ಹೋದ ಕಣ್ಣೀರನ್ನು ಗಮನಿಸಿ ಆ ಕೃತಕವಾದ ನಗುವನ್ನು ಹೃದಯತುಂಬಿ ನಗುವಂತೆ ಮಾಡಬಲ್ಲ ಮಾಂತ್ರಿಕರಾಗಿರುತ್ತಾರೆ.
ಒಮ್ಮೆ ಪ್ರೀತಿ ಸ್ನೇಹವನ್ನು ಭೇಟಿಯಾಗಿ ಕೇಳಿತಂತೆ, ನಾನಿರುವಾಗ ಭೂಮಿಯಲ್ಲಿ ನಿನ್ನ ಅವಶ್ಯಕತೆಯಾದರೂ ಏನಿದೆ ಎಂದು. ಅದಕ್ಕೆ ಸ್ನೇಹ ಹೇಳಿತಂತೆ ನಿನ್ನಿಂದ ಒಬ್ಬ ವ್ಯಕ್ತಿ ಕಣ್ಣೀರು ಹಾಕಿದಾಗ ಅವನ ಕಣ್ಣೀರು ಒರೆಸಿ ನಿನ್ನ ಜೊತೆ ನಾನಿದ್ದೇನೆ ಎಂದು ಭರವಸೆ ನೀಡಲು ನಾನಿರಬೇಕು ಎಂದು.
ಸ್ನೇಹ ಮತ್ತು ಪ್ರೀತಿ ಕೆಲವೊಮ್ಮೆ ಒಂದೇ ರೀತಿಯಂತೆ ಕಾಣಿಸಿದರೂ ಸ್ನೇಹಕ್ಕೆ ತನ್ನದೇ ಆದ ಮಹತ್ವವಿದೆ. ಪ್ರೀತಿ ಎನ್ನುವುದು ಸ್ವಾರ್ಥವಾಗಿದ್ದರೆ, ಸ್ನೇಹ ಎನ್ನುವುದು ನಿಸ್ವಾರ್ಥ ಭಾವ. ಬಲ್ಲವನೇ ಬಲ್ಲ ಬೆಲ್ಲದ ಸವಿಯನ್ನು ಎಂಬಂತೆ ಸ್ನೇಹದ ಸವಿ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತಿರಲು ಸಾಧ್ಯ.
ಇಂತಹ ಸ್ನೇಹವನ್ನು ಜೀವನದುದ್ದಕ್ಕೂ ನಿಭಾಯಿಸಬೇಕಾದದ್ದು ನಮ್ಮ ಜವಾಬ್ದಾರಿ ಕೂಡ ಹೌದು. ಹಾಗಾಗಿ ಈ ಸುಂದರವಾದ ಸಂಬಂಧವನ್ನು ಗೌರವಿಸುವುದಕ್ಕಾಗಿಯೇ ಏಷ್ಯಾದಾದ್ಯಂತ ಹೆಚ್ಚಿನ ದೇಶಗಳಲ್ಲಿ ಪ್ರತಿವರ್ಷ ಅಗಸ್ಟ್ ಮೊದಲನೇ ವಾರದ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.
ಜುಲೈ 30, 1958 ರಂದು ಜಾಗತಿಕವಾಗಿ ಸ್ನೇಹ ದಿನವನ್ನು ಆಚರಿಸುವ ಯೋಚನೆ ಡಾ. ರಾಮನ್ ಆರ್ಟೆಮಿಯೊ ಬ್ರಾಚೊಗೆ ಬಂದಿತು. ಅವರು ಪರಾಗ್ವೆದ ಪೋರ್ಟೊ ಪಿನಾಸ್ಕೊ ಪಟ್ಟಣದಲ್ಲಿ ತಮ್ಮ ಸ್ನೇಹಿತರೊಂದಿಗೆ ಭೋಜನಕ್ಕೆ ಕುಳಿತಾಗ, ಅವರ ಸ್ನೇಹಿತರ ಗುಂಪು ವಿಶ್ವ ಸ್ನೇಹ ದಿನಾಚರಣೆಗೆ ದಾರಿ ಮಾಡಿಕೊಟ್ಟಿತು. ಇದು ಲಿಂಗ, ಜನಾಂಗ, ಜನಾಂಗೀಯತೆ ಅಥವಾ ಧರ್ಮವನ್ನು ಲೆಕ್ಕಿಸದೆ ಮಾನವಕುಲದ ನಡುವೆ ಸ್ನೇಹ ಮತ್ತು ಬಾಂಧವ್ಯವನ್ನು ಉತ್ತೇಜಿಸುವ ಒಂದು ಅಡಿಪಾಯವಾಯಿತು. ಇದನ್ನು ಅನುಸರಿಸಿ, ಯುನೈಟೆಡ್ ಸ್ಟೇಟ್ಸ್ ನ ಸಾಮಾನ್ಯ ಸಭೆ ಜುಲೈ 30 ಅನ್ನು 2011 ರಲ್ಲಿ ಅಂತರರಾಷ್ಟ್ರೀಯ ಸ್ನೇಹ ದಿನವೆಂದು ಗೊತ್ತುಪಡಿಸಿತು. ಎಲ್ಲಾ ಸದಸ್ಯ ರಾಷ್ಟ್ರಗಳು ತಮ್ಮದೇ ಆದ ಪದ್ಧತಿಗಳು ಮತ್ತು ಅಭ್ಯಾಸಗಳಿಗೆ ಅನುಗುಣವಾಗಿ ಆಚರಿಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಆದರೆ ಭಾರತವು ಸೇರಿದಂತೆ ಏಷ್ಯಾದಾದ್ಯಂತದ ಹೆಚ್ಚಿನ ದೇಶಗಳಲ್ಲಿ, ಸ್ನೇಹಿತರ ದಿನವನ್ನು ಆಗಸ್ಟ್ ನ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.
ಸ್ನೇಹ ದಿನವನ್ನು ಮೊದಲ ಬಾರಿಗೆ ಹಾಲ್ಮಾರ್ಕ್ ಕಾರ್ಡ್‌ಗಳ ಸಂಸ್ಥಾಪಕ ಜಾಯ್ಸ್ ಹಾಲ್ 1930 ರಲ್ಲಿ ಆಯೋಜಿಸಿದ್ದರು. ಆಗಸ್ಟ್ 2 ರಂದು ಜನರು ಒಗ್ಗೂಡಿ ತಮ್ಮ ಸೌಹಾರ್ದವನ್ನು ಆಚರಿಸಲು ಅವರು ಉದ್ದೇಶಿಸಿದ್ದರು. ಆ ದಿನ ಸ್ನೇಹಿತರೆಲ್ಲಾ ಒಟ್ಟಿಗೆ ಸೇರಿ ಶುಭಾಶಯ ಪತ್ರಗಳನ್ನು, ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು ಸ್ನೇಹಿತರ ದಿನಾಚರಣೆ ಆಚರಿಸಲು ಪ್ರಾರಂಭಿಸಿದರು.
ಸ್ನೇಹಿತರ ದಿನದ ಆಚರಣೆ ಪಾಶ್ಚಿಮಾತ್ಯ ರಾಷ್ಟ್ರಗಳ ಕೊಡುಗೆಯಾದರೂ ವಸುದೈವ ಕುಟುಂಬಕಂ ಎಂದರೆ, ಇಡೀ ವಿಶ್ವವೇ ನನ್ನ ಕುಟುಂಬ ಎಂದು ಸಂದೇಶ ಸಾರಿದ ಭಾರತೀಯ ಸಂಸ್ಕೃತಿಯ ನಮ್ಮದು. ಅಷ್ಟೇ ಅಲ್ಲ ನಮ್ಮ ಪುರಾಣದಲ್ಲಿ ಸ್ನೇಹ ಎನ್ನುವುದು ಹೇಗಿರಬೇಕು ಎಂದು ಹೇಳುವ ಅನೇಕ ಕತೆಗಳಿವೆ. ಅದರಲ್ಲಿ ಪ್ರಮುಖವಾದದ್ದು ದುರ್ಯೋಧನ- ಕರ್ಣ ಮತ್ತು ಕೃಷ್ಣ- ಕುಚೇಲರ ಸ್ನೇಹ.
ಮಹಾಭಾರತದಲ್ಲಿ ಬರುವ ದುರ್ಯೋಧನ ಎಷ್ಟೇ ದುಷ್ಟನಾದರೂ ಆತನ ಮತ್ತು ಕರ್ಣನ ಸ್ನೇಹ ಇಂದಿಗೂ ಮಾದರಿ. ಪಂಪ ಭಾರತದಲ್ಲಿ ಹೇಳಿರುವಂತೆ ದುರ್ಯೋಧನ ಮತ್ತು ಕರ್ಣನ ಸ್ನೇಹ ಅದೆಷ್ಟು ಗಾಢವಾಗಿತ್ತು ಎಂದರೆ ಕರ್ಣನಿಗೆ ದುರ್ಯೋಧನನ ಅಂತಃಪುರಕ್ಕೆ ಮುಕ್ತ ಪ್ರವೇಶವಿತ್ತು. ಒಮ್ಮೆ ಕರ್ಣ ದುರ್ಯೋಧನನ ಪತ್ನಿ ಭಾನುಮತಿ ಜೊತೆಗೆ ಅಂತಃಪುರದಲ್ಲಿ ಪಗಡೆಯಾಡುತ್ತಿದ್ದ. ಆಗ ಭಾನುಮತಿ ತನ್ನ ಕುತ್ತಿಗೆಯಲ್ಲಿದ್ದ ಮುತ್ತಿನ ಸರವನ್ನು ಪಣಕ್ಕೀಡುತ್ತಾಳೆ. ಆಟದಲ್ಲಿ ಸೋತ ಭಾನುಮತಿಯ ಕುತ್ತಿಗೆಯಲ್ಲಿದ್ದ ಸರವನ್ನು ಗೆದ್ದ ಭರದಲ್ಲಿ ಕರ್ಣ ಎಳೆದಾಗ ಆಕೆಯ ಸರ ಕಿತ್ತು ಮಣಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬೀಳುತ್ತದೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ದುರ್ಯೋಧನ ಬರುತ್ತಾನೆ. ಕರ್ಣ ಮತ್ತು ಭಾನುಮತಿ ದುರ್ಯೋಧನ ನಮ್ಮನ್ನು ತಪ್ಪಾಗಿ ಗ್ರಹಿಸಿರಬಹುದು ಎಂದು ಕಕ್ಕಾಬಿಕ್ಕಿಯಾಗುತ್ತಾರೆ. ಆದರೆ ದುರ್ಯೋಧನ ಬಿದ್ದಿರುವ ಮಣಿಗಳನ್ನು ಆಯ್ದು ಪೋಣಿಸಿ ಕೊಡಲೇ ಎಂದು ತನ್ನ ಸ್ನೇಹಿತನ ಮೇಲಿನ ನಂಬಿಕೆಯನ್ನು ಸಾರುತ್ತಾನೆ.
ಗೆಳೆತನ ಎನ್ನುವುದು ಆಸ್ತಿ ಅಂತಸ್ತನ್ನು ಮೀರಿದ್ದು ಎನ್ನುವುದನ್ನು ಕೃಷ್ಣ ಕುಚೇಲರ ಕತೆ ನಮಗೆ ತಿಳಿಸುತ್ತದೆ. ಒಂದು ದಿನ ಬಡ ಕುಚೇಲ ತನ್ನ ಗೆಳೆಯನಾದ ಶ್ರೀ ಕೃಷ್ಣನನ್ನು ಕಾಣಲು ಹರಿದ ಬಟ್ಟೆಯಲ್ಲಿ ಅವಲಕ್ಕಿಯನ್ನು ಕಟ್ಟಿಕೊಂಡು ದ್ವಾರಕೆಗೆ ಹೋಗುತ್ತಾನೆ. ಅವನ ವೇಷಭೂಷಣ ನೋಡಿದ ರಾಜಭಟರು ಅರಮನೆಯ ಒಳಗೆ ಕುಚೇಲನಿಗೆ ಪ್ರವೇಶ ನಿರಾಕರಿಸುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ಕೃಷ್ಣ ತನ್ನ ಸ್ನೇಹಿತನನ್ನು ನೋಡಿ ಬಿಗಿದಪ್ಪಿಕೊಂಡು ಒಳಗೆ ಕರೆದೊಯ್ದು ಅತಿಥಿ ಸತ್ಕಾರ ಮಾಡುತ್ತಾನೆ. ನಂತರ ಕೃಷ್ಣ ಕುಚೇಲನಲ್ಲಿ ನನಗಾಗಿ ಏನೋ ತಂದಿರುವ ಹಾಗಿದೆಯಲ್ಲ ಎನ್ನಲು ಕೃಷ್ಣನ ವೈಭವಗಳನ್ನು ನೋಡಿದ ಕುಚೇಲ ತಾನು ತಂದಿರುವ ಅವಲಕ್ಕಿಯನ್ನು ಕೊಡುವುದು ಬೇಡ ಎಂದು ನಿರ್ಧರಿಸಿ ಗಂಟನ್ನು ಅಡಗಿಸಿಡುತ್ತಾನೆ. ಅಷ್ಟರಲ್ಲಿ ಆ ಗಂಟನ್ನು ತಾನೇ ಎತ್ತಿಕೊಂಡ ಕೃಷ್ಣ ಆಹಾ.. ಎಷ್ಟು ರುಚಿಯಾಗಿದೆ ಎಂದು ಗಂಟನ್ನು ಬಿಚ್ಚಿ ಅವಲಕ್ಕಿಯನ್ನು ಸವಿಯುತ್ತಾನೆ. ಅಷ್ಟೇ ಅಲ್ಲ ಸಹಾಯ ಕೇಳಲು ಬಂದು ಹಾಗೆ ಹಿಂತಿರುಗಿದ ಕುಚೇಲನ ಬಡತನವನ್ನು ಹೋಗಲಾಡಿಸಿರುತ್ತಾನೆ.
ಸ್ನೇಹ ಎನ್ನುವುದು ಪದಗಳಿಗೆ ನಿಲುಕದ ಅದ್ಭುತ ಅನುಭವ.. ಇಂತಹ ಸುಂದರ ಸ್ನೇಹವನ್ನು ಪದಗಳಲ್ಲಿ ಬಣ್ಣಿಸುವುದು ಅಸಾಧ್ಯ. ಬಿಗುಮಾನದ ಶುಷ್ಕವಿಲ್ಲದ, ಕೇವಲವಾಗುವ ಆತಂಕವಿಲ್ಲದ, ಕಷ್ಟ ಸುಖ ಎಲ್ಲದರಲ್ಲೂ ಜೊತೆಯಾಗುವ, ಭಾವನೆಗಳ ಜೊತೆಗಿನ ಸ್ನೇಹದ ಪಯಣ ಎಂದಿಗೂ ಮುಗಿಯದಿರಲಿ.. ಆದ್ದರಿಂದ ನಿಮ್ಮ ದಿನಚರಿಯಲ್ಲಿ ಸ್ನೇಹಿತರಿಗೂ ಒಂದಿಷ್ಟು ಸಮಯವಿರಲಿ ಮತ್ತು ಈ ಸಂದರ್ಭದಲ್ಲಿ ಅವರಿಗೆ ಶುಭಾಶಯ ಹೇಳಲು ಮರೆಯದಿರಿ.
ಸಾಕ್ಷಟಿವಿ.ಕಾಮ್ ವತಿಯಿಂದ ಎಲ್ಲ ಓದುಗರಿಗೂ ಗೆಳೆಯರ ದಿನದ ಶುಭಾಶಯಗಳು