ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 120/ಬಿ, 504, 463, 465, 506 ಅಡಿ ಪ್ರಕರಣ ಎಫ್ಐಆರ್ ದಾಖಲಿಸಲಾಗಿದೆ. ಐಪಿಎಸ್ ಸೆಕ್ಷನ್ 120/ಬಿ(ಕ್ರಿಮಿನಲ್ ಪಿತೂರಿ), 504(ಮಾನಹಾನಿ), 463(ಫೋರ್ಜರಿ), 465(ಸಹಿ ನಕಲು), 506(ಜೀವ ಬೆದರಿಕೆ) ಅಡಿ ಕೇಸ್ ದಾಖಲಾಗಿದೆ.
ಪ್ರಶಾಂತ್ ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹಮದ್ ಮಾನಹಾನಿ ದೂರು ನೀಡಿದ್ದರು. ಜಮೀರ್ ದೂರು ಸ್ವೀಕರಿಸಿದ್ದ ಪೊಲೀಸರು, ಎನ್ಸಿಆರ್ ದಾಖಲಿಸಿಕೊಂಡಿದ್ದರು. ಡ್ರಗ್ಸ್ ಕೇಸ್ನಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡುವ ಮೂಲಕ ಒಳಸಂಚು ರೂಪಿಸಿ ಮಾನಹಾನಿ ಮಾಡುತ್ತಿದ್ದಾರೆ ಎಂದು ಜಮೀರ್ ದೂರು ನೀಡಿದ್ದರು.
ಜಮೀರ್ ವಿರುದ್ಧ ಎಫ್ಐಆರ್ ದಾಖಲಿಸುವ ಮುನ್ನ ಪೊಲೀಸರು ನ್ಯಾಯಾಲಯದ ಅನುಮತಿ ಕೇಳಿದ್ದರು. ನ್ಯಾಯಾಲಯದ ಅನುಮತಿ ಮೇರೆಗೆ ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಜಮೀರ್ ಅಹಮದ್ ಅವರು ಕಳೆದ ವರ್ಷ ನಟಿ ಸಂಜನಾ ಜತೆ ಶ್ರೀಲಂಕಾದ ಕ್ಯಾಸಿನೋ ಉದ್ಘಾಟನೆಗೆ ತೆರಳಿದ್ದರು ಎಂದು ಸಂಬರಗಿ ಗಂಭೀರ ಆರೋಪ ಮಾಡಿದ್ದರು. ಜತೆಗೆ ಕ್ಯಾಸಿನೋದಲ್ಲಿ ಜೂಜು ಆಡಿ ಕೋಟ್ಯಂತರ ರೂಪಾಯಿ ಕಳೆದುಕೊಂಡು ಬಂದಿದ್ದರು. ಈ ಹಣ ಎಲ್ಲಿಂದ ಬಂತು, ಹೇಗೆ ತೆಗೆದುಕೊಂಡು ಹೋಗಿದ್ದರು ಎಂದು ಪ್ರಶಾಂತ್ ಸಂಬರಗಿ ಪ್ರಶ್ನೆ ಮಾಡಿದ್ದರು.
ಕೋರ್ಟ್ ಮೂಲಕವೇ ಉತ್ತರ ನೀಡುತ್ತೇನೆ-ಜಮೀರ್
ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲು ಮಾಡಲು ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶದಂತೆ ಎಫ್ಐಆರ್ ದಾಖಲಿಸಲಾಗಿದೆ. ನಾನು ಕಾನೂನು ಪ್ರಕಾರವೇ ಮುನ್ನಡೆಯುತ್ತೇನೆ. ಸಂಬರಗಿ ಏನು ಹೇಳಿದರೂ ನ್ಯಾಯಾಲಯದ ಮೂಲಕ ಉತ್ತರ ನೀಡುತ್ತೇನೆ. ನ್ಯಾಯಾಲಯದ ಮೂಲಕ ಮಾನನಷ್ಟ ಕೇಸ್ ದಾಖಲಿಸುತ್ತೇನೆ. ನನ್ನ ಕೈವಾಡವಿದ್ದರೆ ತನಿಖೆ ಆಗಲಿ. ನಟಿ ಸಂಜನಾ ಈಗ ಎಲ್ಲಿದ್ದಾರೆ. ಸಿಸಿಬಿ ಪೊಲಿಸರ ವಶದಲ್ಲದ್ದಾರೆ. ಸರ್ಕಾರ ಯಾರದ್ದು ಇದೆ. ಹೀಗಾಗಿ ತನಿಖೆ ಆಗಲಿ ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.