ನವದೆಹಲಿ: ಸಿದ್ದರಾಮಯ್ಯ (Siddaramaiah) ಅವರ ಪಟಾಲಂ ನನ್ನನ್ನು ಜೈಲಿಗೆ ಕಳುಹಿಸುವ ಸಂಚು ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಆರೋಪಿಸಿದ್ದಾರೆ.
ದೆಹಲಿಯಲ್ಲಿ (New Delhi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಅಧಿಕಾರಿಯ ಕರ್ಮಕಾಂಡದ ಕುರಿತು ಬಯಲು ಮಾಡಿದ್ದೆ. ಆದರೆ, ಅವರು ನನ್ನನ್ನ ಜೈಲಿಗೆ ಕಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಎಲ್ಲಿ ಯಾರ ಚೇಂಬರ್ ನಲ್ಲಿ ಕುಳಿತು ಮಾತಾಡಿದ್ದಾರೆ ಎಂಬುವುದು ನನಗೆ ಗೊತ್ತಿದೆ. ಅವರೆಲ್ಲ ಒಂದು ದಿನವಾದರೂ ಜೈಲಿಗೆ ಕಳುಹಿಸಲು ಚಿಂತನೆ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಜಾಮೀನು ತೆಗೆದುಕೊಂಡಿದ್ದೇನೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಈ ಸರ್ಕಾರದ ಕೆಟ್ಟ ಅಧಿಕಾರಿಗಳು ಏನು ಬೇಕಾದರೂ ಮಾಡುತ್ತಾರೆ ಎಂದು ನನ್ನ ವಕೀಲರು ಜಾಮೀನು ಪಡೆದುಕೊಳ್ಳಬೇಕು ಎಂದು ಹೇಳಿದ್ದರು ಎಂದಿದ್ದಾರೆ.
ಆ ಪೋಲಿಸ್ ಅಧಿಕಾರಿಯ ಉದ್ಧಟನವನ್ನು ಖಂಡಿಸಿದ್ದೆ. ಆ ಅಧಿಕಾರಿಯ ಹಿನ್ನೆಲೆ ಏನಿದೆ ಎನ್ನುವುದನ್ನು ಹೇಳಿದ್ದೇನೆ.
ಬೆಂಗಳೂರಿನ ಲ್ಯಾಂಡ್ ಮಾಫಿಯಾ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ಜೊತೆ ಅವರ ನೇರ ನಂಟಿದೆ. ಸಮಾಜವಿದ್ರೋಹಿ ಶಕ್ತಿಗಳಿಗೆ ಸಾಥ್ ನೀಡಲು ಈ ವ್ಯಕ್ತಿಗೆ ಐಪಿಎಸ್ ಸ್ಥಾನ ಕೊಟ್ಟಿದ್ದಾರಾ? ಕ್ರಿಮಿನಲ್ ಪ್ರಕರಣದಲ್ಲಿ (Criminal Case) ಅಧಿಕಾರಿಯೇ ಆರೋಪಿ ನಂಬರ್ 2 ಆಗಿದ್ದಾರೆ ಎಂದಿದ್ದಾರೆ.