ವಿದೇಶಕ್ಕೆ ಹೋದರೂ ನಮ್ಮೂರಿನ ಹಳೆ ಅಭ್ಯಾಸಗಳು ಮಾತ್ರ ನಮ್ಮನ್ನು ಬಿಡುವುದಿಲ್ಲ ಎನ್ನುವುದಕ್ಕೆ ಲಂಡನ್ನಲ್ಲಿ ನಡೆದ ಈ ಘಟನೆಯೇ ಜ್ವಲಂತ ಸಾಕ್ಷಿಯಾಗಿದೆ. ಲಂಡನ್ ಮಹಾನಗರದ ಸ್ವಚ್ಛ ಸುಂದರ ಬೀದಿಗಳಲ್ಲಿ ಭಾರತೀಯ ಶೈಲಿಯಲ್ಲಿ ಪಾನ್ ಮಸಾಲ ಜಗಿದು ಉಗುಳುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಅಲ್ಲಿನ ನ್ಯಾಯಾಲಯ ನಕ್ಷತ್ರಾಕಾರವಾಗಿ ಎಣಿಸುವಂತೆ ಮಾಡಿದೆ. ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದ ಸಣ್ಣ ತಪ್ಪು, ಈಗ ಅವರ ಜೇಬಿಗೆ ಲಕ್ಷಾಂತರ ರೂಪಾಯಿ ಕತ್ತರಿ ಬೀಳುವಂತೆ ಮಾಡಿದೆ.
ಅಸಲಿಗೆ ಅಲ್ಲಿ ನಡೆದಿದ್ದೇನು?
ನಮ್ಮಲ್ಲಿ ರಸ್ತೆ ಬದಿಯಲ್ಲಿ ಉಗುಳುವುದು ಸಾಮಾನ್ಯ ಸಂಗತಿ ಇರಬಹುದು, ಆದರೆ ಲಂಡನ್ನ ಕಾನೂನು ಹಾಗಲ್ಲ. ಎಡ್ಗ್ವೇರ್ ನಿವಾಸಿ ಅಕ್ಷಿತ್ಕುಮಾರ್ ಭದ್ರೆ ಪಟೇಲ್ ಎಂಬುವವರು ಕಿಂಗ್ಸ್ಬರಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಮತ್ತು ಹಿತೇಶ್ ಪಟೇಲ್ ಎಂಬುವವರು ವೆಂಬ್ಲಿ ಹಿಲ್ ರಸ್ತೆಯಲ್ಲಿ ಪಾನ್ ಜಗಿದು ರಸ್ತೆಗೆ ಉಗುಳುವಾಗ ಅಲ್ಲಿನ ಜಾರಿ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದರು. ಸಾರ್ವಜನಿಕ ಸ್ಥಳವನ್ನು ಗಲೀಜು ಮಾಡಿದ್ದಕ್ಕಾಗಿ ಅಧಿಕಾರಿಗಳು ಸ್ಥಳದಲ್ಲೇ ಇಬ್ಬರಿಗೂ ತಲಾ 100 ಪೌಂಡ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 10,000 ರೂಪಾಯಿ ದಂಡ ವಿಧಿಸಿದ್ದರು.
ನಿರ್ಲಕ್ಷ್ಯಕ್ಕೆ ಬಿತ್ತು ಭಾರೀ ಬೆಲೆ
ದಂಡದ ರಸೀದಿ ಕೈಗಿದ್ದರೂ, ಇವರಿಬ್ಬರೂ ಅದನ್ನು ಪಾವತಿಸುವ ಗೋಜಿಗೆ ಹೋಗಲಿಲ್ಲ. ಬಹುಶಃ ಭಾರತದಲ್ಲಿ ಚಲನ್ ಕಟ್ಟದೇ ಓಡಾಡುವಂತೆ ಅಲ್ಲಿಯೂ ನಡೆಯುತ್ತದೆ ಎಂದು ಭಾವಿಸಿದ್ದರೋ ಏನೋ, ಅಧಿಕಾರಿಗಳ ಆದೇಶವನ್ನು ಧಿಕ್ಕರಿಸಿದ್ದರು. ಯಾವಾಗ ನಿಗದಿತ ಸಮಯದಲ್ಲಿ ದಂಡ ಪಾವತಿಯಾಗಲಿಲ್ಲವೋ, ಆಗ ಪ್ರಕರಣ ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಿತು.
ವಿಶೇಷವೆಂದರೆ, ನ್ಯಾಯಾಲಯದ ವಿಚಾರಣೆಗೂ ಈ ಇಬ್ಬರು ಹಾಜರಾಗಲಿಲ್ಲ. ಆರೋಪಿಗಳ ಗೈರು ಹಾಜರಿಯಲ್ಲೇ ತೀರ್ಪು ನೀಡಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಹಿತೇಶ್ ಪಟೇಲ್ ಅವರಿಗೆ ಬರೋಬ್ಬರಿ 1,391 ಪೌಂಡ್ ದಂಡ ವಿಧಿಸಿದೆ. ಇದರ ಭಾರತೀಯ ಮೌಲ್ಯ ಸುಮಾರು 1.48 ಲಕ್ಷ ರೂಪಾಯಿಗಳು! ಆರಂಭದಲ್ಲಿ ಕೇವಲ 10 ಸಾವಿರ ರೂಪಾಯಿ ಕಟ್ಟಿ ಮುಗಿಸಬಹುದಾಗಿದ್ದ ಪ್ರಕರಣ, ನಿರ್ಲಕ್ಷ್ಯದ ಕಾರಣದಿಂದಾಗಿ ಈಗ ಒಂದೂವರೆ ಲಕ್ಷದ ಹತ್ತಿರ ಬಂದು ನಿಂತಿದೆ.
ಲಂಡನ್ ಪಾಲಿಕೆಗೆ ತಲೆನೋವಾದ ಪಾನ್ ಕಲೆಗಳು
ವಾಯುವ್ಯ ಲಂಡನ್ನ ಬ್ರೆಂಟ್ ಮತ್ತು ಹ್ಯಾರೋ ಭಾಗಗಳಲ್ಲಿ ಭಾರತೀಯರು ಹಾಗೂ ಏಷ್ಯಾ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಪಾನ್ ಉಗುಳಿದ ಕೆಂಪು ಕಲೆಗಳು ಅಲ್ಲಿನ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಬ್ರಿಟಿಷ್ ಅಧಿಕಾರಿಗಳ ಪ್ರಕಾರ, ಈ ಪಾನ್ ಕಲೆಗಳು ಸಾಮಾನ್ಯ ಕಸದಂತಲ್ಲ, ಇವುಗಳನ್ನು ರಸ್ತೆ ಅಥವಾ ಗೋಡೆಗಳಿಂದ ಅಳಿಸಿ ಹಾಕುವುದು ಅತ್ಯಂತ ಕಷ್ಟದ ಕೆಲಸ.
ಕೇವಲ ಈ ಪಾನ್ ಕಲೆಗಳನ್ನು ಸ್ವಚ್ಛಗೊಳಿಸಲೆಂದೇ ಬ್ರೆಂಟ್ ಕೌನ್ಸಿಲ್ ವರ್ಷಕ್ಕೆ ಬರೋಬ್ಬರಿ 30,000 ಪೌಂಡ್ ಅಂದರೆ ಸುಮಾರು 32 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ. ಸಾರ್ವಜನಿಕರ ತೆರಿಗೆ ಹಣ ಹೀಗೆ ಪೋಲಾಗುತ್ತಿರುವುದನ್ನು ಕಂಡು ಕೆಂಡಾಮಂಡಲವಾಗಿರುವ ಅಧಿಕಾರಿಗಳು, ಇನ್ಮುಂದೆ ಶೂನ್ಯ ಸಹಿಷ್ಣುತೆ (Zero Tolerance) ನೀತಿಯನ್ನು ಅಳವಡಿಸಿಕೊಂಡಿದ್ದಾರೆ.
ನಮ್ಮ ಬೀದಿಗಳನ್ನು ಹಾಳುಮಾಡಬೇಡಿ ಎಂದ ಅಧಿಕಾರಿಗಳು
ಈ ಬಗ್ಗೆ ಖಡಕ್ ಎಚ್ಚರಿಕೆ ನೀಡಿರುವ ಸಾರ್ವಜನಿಕ ಜಾರಿ ವಿಭಾಗದ ಕೌನ್ಸಿಲರ್ ಕೃಪಾ ಶೇತ್, ನಮ್ಮ ಬೀದಿಗಳನ್ನು ಮತ್ತು ಸಾರ್ವಜನಿಕ ಆಸ್ತಿಯನ್ನು ಹಾಳುಮಾಡುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ನಮ್ಮ ಸುಂದರ ನಗರವನ್ನು ನೀವು ಅಸ್ತವ್ಯಸ್ತಗೊಳಿಸಿದರೆ, ನಾವು ನಿಮ್ಮನ್ನು ಹುಡುಕಿಕೊಂಡು ಬರುತ್ತೇವೆ ಮತ್ತು ನೀವು ಅದಕ್ಕೆ ತಕ್ಕ ಭಾರಿ ಬೆಲೆಯನ್ನು ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ, ದೇಶ ಬಿಟ್ಟರೂ ದೇಸಿ ಅಭ್ಯಾಸ ಬಿಡದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆ ಪಾಠವಾಗಿದೆ. ವಿದೇಶಕ್ಕೆ ಹೋಗುವವರು ಅಲ್ಲಿನ ಕಾನೂನು ಮತ್ತು ಸ್ವಚ್ಛತೆಯನ್ನು ಗೌರವಿಸದಿದ್ದರೆ, ಜೇಬು ಖಾಲಿಯಾಗುವುದು ಗ್ಯಾರಂಟಿ.







