ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ದೇಶದಾದ್ಯಂತ ಕ್ರಾಂತಿ ಮಾಡಿರುವ ಯುಪಿಐ ಪಾವತಿ ಕ್ರಮದಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ಬದಲಾವಣೆಯಾಗುವ ಸಾಧ್ಯತೆ ಇದೆ. ನೀವು ಪದೇ ಪದೇ ಹತ್ತು ಸಾವಿರ ರೂಪಾಯಿಗೂ ಹೆಚ್ಚು ಮೊತ್ತದ ಹಣವನ್ನು ಯುಪಿಐ ಅಥವಾ ಐಎಂಪಿಎಸ್ ಮೂಲಕ ವರ್ಗಾಯಿಸುತ್ತಿದ್ದರೆ ಈ ಮಾಹಿತಿ ನಿಮಗೆ ಅತ್ಯಂತ ಮುಖ್ಯವಾಗಿದೆ. ಸೈಬರ್ ವಂಚನೆಯ ಜಾಲಕ್ಕೆ ಬಿದ್ದು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿರುವ ಜನರನ್ನು ರಕ್ಷಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಮೊದಲನೆಯದಾಗಿ ನೀವು ಯುಪಿಐ ಮೂಲಕ 10,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ಯಾರಿಗಾದರೂ ಕಳುಹಿಸಿದರೆ ಆ ಹಣ ತಕ್ಷಣವೇ ಅವರಿಗೆ ತಲುಪುವುದಿಲ್ಲ. ಈ ವಹಿವಾಟಿಗೆ ಕನಿಷ್ಠ ಒಂದು ಗಂಟೆಯ ಕೂಲಿಂಗ್ ಅವಧಿಯನ್ನು ನಿಗದಿಪಡಿಸಲು ಆರ್‌ಬಿಐ ಚಿಂತಿಸುತ್ತಿದೆ. ಇದರರ್ಥ ನೀವು ಹಣ ಕಳುಹಿಸಿದ ನಂತರ ಎದುರಿಗಿರುವ ವ್ಯಕ್ತಿ ಅದನ್ನು ಸ್ವೀಕರಿಸಲು ಒಂದು ಗಂಟೆ ಕಾಯಬೇಕಾಗುತ್ತದೆ. ಈ ಅವಧಿಯಲ್ಲಿ ನೀವು ವಂಚನೆಗೊಳಗಾಗುತ್ತಿದ್ದೀರಿ ಎಂದು ನಿಮಗೆ ಅರಿವಾದರೆ ತಕ್ಷಣವೇ ಆ ವಹಿವಾಟನ್ನು ರದ್ದುಗೊಳಿಸುವ ಅವಕಾಶ ನಿಮಗಿರುತ್ತದೆ.
ಯಾಕಾಗಿ ಈ ಕಟ್ಟುನಿಟ್ಟಿನ ನಿಯಮ ಜಾರಿಯಾಗುತ್ತಿದೆ
ಕಳೆದ 2025 ರ ಸಾಲಿನಲ್ಲಿ ಭಾರತದಲ್ಲಿ ಸುಮಾರು 22,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಡಿಜಿಟಲ್ ವಂಚನೆಗಳ ಮೂಲಕ ಜನರು ಕಳೆದುಕೊಂಡಿದ್ದಾರೆ. ದೇಶದ ಒಟ್ಟು ವಂಚನೆಗಳ ಅಂಕಿಅಂಶಗಳನ್ನು ಗಮನಿಸಿದಾಗ ಶೇಕಡಾ 98.5 ರಷ್ಟು ವಂಚನೆಗಳು 10,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟುಗಳಲ್ಲೇ ನಡೆಯುತ್ತಿವೆ. ವಂಚಕರು ಜನರನ್ನು ಬೆದರಿಸಿ ಅಥವಾ ಆಮಿಷವೊಡ್ಡಿ ತಕ್ಷಣವೇ ಹಣ ವರ್ಗಾಯಿಸುವಂತೆ ಒತ್ತಡ ಹೇರುತ್ತಾರೆ. ಅಂತಹ ಸಂದರ್ಭದಲ್ಲಿ ಈ ಒಂದು ಗಂಟೆಯ ವಿಳಂಬವು ಜನರಿಗೆ ಯೋಚಿಸಲು ಸಮಯ ನೀಡುತ್ತದೆ ಮತ್ತು ಅವರ ಹಣವನ್ನು ರಕ್ಷಿಸುತ್ತದೆ.
ಹಿರಿಯ ನಾಗರಿಕರಿಗೆ ಸಿಗಲಿದೆ ವಿಶೇಷ ಭದ್ರತೆ
ಸೈಬರ್ ವಂಚಕರು ಹೆಚ್ಚಾಗಿ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು 70 ವರ್ಷ ಮೇಲ್ಪಟ್ಟವರು 50,000 ರೂಪಾಯಿಗಿಂತ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುವಾಗ ಅವರು ಮೊದಲೇ ಗುರುತಿಸಿದ ಒಬ್ಬ ವಿಶ್ವಾಸಾರ್ಹ ವ್ಯಕ್ತಿಯ ಅನುಮತಿಯನ್ನು ಪಡೆಯುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಹೊಸ ಮಾರ್ಗಸೂಚಿ ಸಿದ್ಧವಾಗುತ್ತಿದೆ. ಇದು ಮನೆಯ ಹಿರಿಯರ ಬ್ಯಾಂಕ್ ಖಾತೆಗಳಿಗೆ ಹೆಚ್ಚಿನ ಸುರಕ್ಷತೆ ನೀಡಲಿದೆ.
ಕಿಲ್ ಸ್ವಿಚ್ ಎಂಬ ಹೊಸ ಸುರಕ್ಷತಾ ಅಸ್ತ್ರ
ಒಂದು ವೇಳೆ ನಿಮ್ಮ ಖಾತೆಯಿಂದ ನಿಮ್ಮ ಅನುಮತಿಯಿಲ್ಲದೆ ಹಣ ಕಡಿತವಾಗುತ್ತಿದ್ದರೆ ಅಥವಾ ಯಾರಾದರೂ ನಿಮ್ಮ ಮೇಲೆ ಡಿಜಿಟಲ್ ದಾಳಿ ಮಾಡುತ್ತಿದ್ದಾರೆ ಎಂಬ ಭಯವಿದ್ದರೆ ತಕ್ಷಣವೇ ಎಲ್ಲಾ ಡಿಜಿಟಲ್ ಸೇವೆಗಳನ್ನು ಸ್ಥಗಿತಗೊಳಿಸಲು ಕಿಲ್ ಸ್ವಿಚ್ ಎಂಬ ಆಯ್ಕೆಯನ್ನು ನೀಡಲಾಗುವುದು. ಗ್ರಾಹಕರು ಈ ಒಂದು ಬಟನ್ ಒತ್ತುವ ಮೂಲಕ ತಮ್ಮ ಯುಪಿಐ, ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಕಾರ್ಡ್ ಸೇವೆಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಬಹುದು.
ದೊಡ್ಡ ಮೊತ್ತದ ಠೇವಣಿಗಳ ಮೇಲೆ ಇರಲಿದೆ ಕಣ್ಣು
ವೈಯಕ್ತಿಕ ಅಥವಾ ಸಣ್ಣ ವ್ಯಾಪಾರ ಖಾತೆಗಳಿಗೆ ಏಕಾಏಕಿ 2.5 ಮಿಲಿಯನ್ ಅಂದರೆ 25 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣ ಜಮೆಯಾದರೆ ಅಂತಹ ಖಾತೆಗಳನ್ನು ಬ್ಯಾಂಕುಗಳು ಸಂಪೂರ್ಣವಾಗಿ ಪರಿಶೀಲಿಸಲಿವೆ. ಮೂಲಗಳನ್ನು ಪತ್ತೆ ಹಚ್ಚಿದ ನಂತರವೇ ಆ ಹಣವನ್ನು ಬಳಸಲು ಅನುಮತಿ ನೀಡುವ ನಿಯಮವೂ ಬರಬಹುದು.
ಈ ಎಲ್ಲಾ ಹೊಸ ಪ್ರಸ್ತಾವನೆಗಳ ಕುರಿತು ಕೇಂದ್ರ ಸರ್ಕಾರವು 2026 ರ ಮೇ 8 ರವರೆಗೆ ಸಾರ್ವಜನಿಕರ ಮತ್ತು ತಜ್ಞರ ಸಲಹೆಗಳನ್ನು ಕೇಳಿದೆ. ಆ ನಂತರ ಈ ನಿಯಮಗಳು ಅಧಿಕೃತವಾಗಿ ಜಾರಿಗೆ ಬರುವ ಸಾಧ್ಯತೆ ಇದೆ. ಇದು ಆರಂಭದಲ್ಲಿ ಜನರಿಗೆ ಪಾವತಿ ಮಾಡಲು ಸ್ವಲ್ಪ ವಿಳಂಬ ಅಥವಾ ಅನಾನುಕೂಲ ಎನಿಸಿದರೂ ಲಕ್ಷಾಂತರ ಜನರ ಹಣವನ್ನು ಕಳ್ಳರ ಪಾಲಾಗದಂತೆ ತಡೆಯಲು ಇದು ಕ್ರಾಂತಿಕಾರಿ ಹೆಜ್ಜೆಯಾಗಲಿದೆ.







