ಇಸ್ಲಾಮಾಬಾದ್: 14 ವರ್ಷದ ಹಿಂದು ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಬಲವಂತವಾಗಿ ಇಸ್ಲಾಂಗೆ (Islam) ಮತಾಂತರ ಮಾಡಲಾಗಿದ್ದು, ಸದ್ಯ ಪೋಷಕರೊಂದಿಗೆ ಬಾಲಕಿ ತೆರಳುತ್ತೇನೆಂದರೂ ಪಾಕಿಸ್ತಾನ ಕೋರ್ಟ್ (Pakistan Court) ನಿರಾಕರಿಸಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 14 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿದೆ. ಅಲ್ಲದೇ, ಬಾಲಕಿಯನ್ನು ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪೋಷಕರ ಜೊತೆಗೆ ಹೋಗಲು ಆಕೆ ಬಯಸಿದರೂ, ಕಳುಹಿಸಲು ಪಾಕ್ ಕೋರ್ಟ್ ನಿರಾಕರಿಸಿದೆ.
ಜೂನ್ 2 ರಂದು ದಕ್ಷಿಣ ಸಿಂಧ್ ಪ್ರಾಂತ್ಯದ ಬೆನಜಿರಾಬಾದ್ ಜಿಲ್ಲೆಯ ನಿವಾಸಿಯಾಗಿದ್ದ ಬಾಲಕಿಯನ್ನು ಆಕೆಯ ತಾಯಿಯ ಎದುರೇ ಗನ್ ತೋರಿಸಿ ಅಪಹರಿಸಲಾಗಿತ್ತು. ತನ್ನ ಮಗಳನ್ನು ಪಹರಿಸಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಮಹಿಳೆಯು ದೂರು ದಾಖಲಿಸಿದ್ದರು.
ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ ಮುಸ್ಲಿಂ ವ್ಯಕ್ತಿಯೊಂದಿಗೆ ಆಕೆಯನ್ನು ಮದುವೆ ಮಾಡಲಾಗಿದೆ. ಈ ಕುರಿತು ಪಾಪಿಗಳು ವಿಡಿಯೋ ಕೂಡ ಮಾಡಿದ್ದಾರೆ. ಐದ ದಿನಗಳ ನಂತರ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಳಲು ತೋಡಿಕೊಂಡು ವೀಡಿಯೋ ಮಾಡಿದ್ದಳು. ನಂತರ ಕಾರ್ಯಪ್ರವೃತ್ತರಾದ ಮನೆಯವರು ಮನೆಯೊಂದರಿಂದ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ.
ಆನಂತರ ಆಕೆಯನ್ನು ಲರ್ಕಾನಾದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತನ್ನನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆ. ನಾನು ನನ್ನ ಪೋಷಕರ ಬಳಿಗೆ ಹೋಗಬೇಕು ಎಂದು ನ್ಯಾಯಾಧೀಶರ ಮುಂದೆ ಬಾಲಕಿ ಹೇಳಿದ್ದಾಳೆ. ಆದರೆ, ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಜೂ. 12ಕ್ಕೆ ಮುಂದೂಡಿದೆ.







