ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇಂದು ಡಿಕೆ ಶಿವಕುಮಾರ್, ಸಚಿವ ಪ್ರಿಯಾಂಕಾ ಖರ್ಗೆ ಪ್ರತಿನಿಧಿಸುವ ಕಲಬುರಗಿಯ ಚಿತ್ತಾಪುರ ಕ್ಷೇತ್ರದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ನಂತರ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕಲಬುರಗಿಯಿಂದಲೇ ದೆಹಲಿಗೆ ಜೊತೆಯಾಗಿ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳುತ್ತಿರುವುದಕ್ಕೆ ನೀರಾವರಿ ಇಲಾಖೆಗೆ ಸಂಬಂಧಿಸಿದ ಕೆಲವು ಮಹತ್ವದ ಕಾರ್ಯಗಳು ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಬಜೆಟ್ ಬಳಿಕ ತಕ್ಷಣವೇ ಈ ಪ್ರಯಾಣ ನಡೆಯುತ್ತಿರುವುದರಿಂದ ರಾಜಕೀಯವಾಗಿ ಹಲವು ಊಹಾಪೋಹಗಳೂ ಕೇಳಿಬರುತ್ತಿವೆ.
ಈ ಭೇಟಿ ವೇಳೆ ಕೇಂದ್ರ ಮಟ್ಟದಲ್ಲಿ ಕೆಲವು ಪ್ರಮುಖ ಚರ್ಚೆಗಳು ನಡೆಯುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.







