ಬೆಂಗಳೂರು: ರಾಜ್ಯದಲ್ಲಿ ಬದುಕಿರುವವರಿಗಷ್ಟೇ ಅಲ್ಲ, ಮೃತಪಟ್ಟವರಿಗೂ ಮಣ್ಣಾಗಲು ಜಾಗವಿಲ್ಲದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿದ್ದ ಸರ್ಕಾರಿ ಜಮೀನ್ನೆಲ್ಲಾ ಇತರೆ ಉದ್ದೇಶಗಳಿಗೆ ಹಂಚಿಕೆ ಮಾಡಿ, ಇದೀಗ ಸ್ಮಶಾನಕ್ಕೆ ಜಾಗವಿಲ್ಲದೆ ಸರ್ಕಾರವೇ ಅಕ್ಷರಶಃ ಭಿಕ್ಷಾಪಾತ್ರೆ ಹಿಡಿದು ಓಡಾಡುವ ಸ್ಥಿತಿ ಬಂದೊದಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತೀವ್ರ ಬೇಸರ ಮತ್ತು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಬಿ. ಚೌವಾಣ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಸ್ಮಶಾನ ಭೂಮಿಯ ಕೊರತೆ ಎಷ್ಟರಮಟ್ಟಿಗೆ ತೀವ್ರವಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಹಿಂದಿನ ಅವಧಿಗಳಲ್ಲಿ ಸರ್ಕಾರಿ ಭೂಮಿಯನ್ನು ರೈತರಿಗೆ ಸಾಗುವಳಿ ಚೀಟಿ ನೀಡುವುದು ಸೇರಿದಂತೆ ವಿವಿಧ ಖಾಸಗಿ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಉದಾರವಾಗಿ ಹಂಚಿಕೆ ಮಾಡಲಾಗಿದೆ. ಇದರ ಪರಿಣಾಮವಾಗಿ ಗ್ರಾಮಗಳಲ್ಲಿ ಹಾಗೂ ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯೇ ಇಲ್ಲದಂತಾಗಿದೆ. ಈಗ ಸ್ಮಶಾನದಂತಹ ಅತ್ಯಗತ್ಯ ಮೂಲಸೌಕರ್ಯಕ್ಕೂ ಭೂಮಿ ಒದಗಿಸಲು ಸರ್ಕಾರ ಪರದಾಡುವಂತಾಗಿದೆ ಎಂದು ಸಚಿವರು ವಿವರಿಸಿದರು.
ಸರ್ಕಾರಿ ಭೂಮಿ ಲಭ್ಯವಿಲ್ಲದ ಕಾರಣ, ಅಂತ್ಯಸಂಸ್ಕಾರಕ್ಕೆ ಜಾಗ ಒದಗಿಸಲು ಸರ್ಕಾರ ಅನಿವಾರ್ಯವಾಗಿ ಖಾಸಗಿ ವ್ಯಕ್ತಿಗಳ ಮೊರೆ ಹೋಗಬೇಕಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ಸ್ಮಶಾನಕ್ಕಾಗಿ ಭೂಮಿ ಒದಗಿಸಲು ಸರ್ಕಾರ ಬರೋಬ್ಬರಿ 58 ಕೋಟಿ ರೂಪಾಯಿ ವೆಚ್ಚ ಮಾಡಿ ಖಾಸಗಿ ಜಮೀನು ಖರೀದಿಸಿದೆ. ಜನವಸತಿ ಪ್ರದೇಶಗಳು, ಲಂಬಾಣಿ ತಾಂಡಾಗಳು ಹಾಗೂ ಹಿಂದುಳಿದ ವರ್ಗಗಳ ಕಾಲೋನಿಗಳಿಗೆ ಸ್ಮಶಾನ ಭೂಮಿ ನೀಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದರೂ, ಜಮೀನಿನ ಲಭ್ಯತೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಜಿಲ್ಲಾಧಿಕಾರಿಗಳ ಬಳಿ ಸ್ಮಶಾನ ಭೂಮಿ ಖರೀದಿಸಲು ಅನುದಾನ ಲಭ್ಯವಿದ್ದರೂ, ಮಾರಾಟ ಮಾಡಲು ಭೂಮಾಲೀಕರು ಮುಂದೆ ಬರುತ್ತಿಲ್ಲ ಅಥವಾ ಸೂಕ್ತ ಜಾಗ ಸಿಗುತ್ತಿಲ್ಲ. ಒಟ್ಟಾರೆಯಾಗಿ ದೂರದೃಷ್ಟಿಯಿಲ್ಲದ ಭೂ ಹಂಚಿಕೆಯಿಂದಾಗಿ, ಇಂದು ಅಂತಿಮ ವಿಧಿವಿಧಾನಕ್ಕೂ ಜಾಗವಿಲ್ಲದೆ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ ಎಂಬ ಕಟು ಸತ್ಯವನ್ನು ಸಚಿವರು ಸದನದ ಮುಂದಿಟ್ಟರು.







