ಶ್ರೀ ಶೈಲದಲ್ಲಿ ಕನ್ನಡಿಗರ ಮೇಲೆ ಮತ್ತೊಮ್ಮೆ ಹಲ್ಲೆ – KSRTC ಬಸ್ ಚಾಲಕನ ಮೇಲೆ ಮಾರಣಾಂತಿಕ ದಾಳಿ..
ಆಂಧ್ರ ಪ್ರದೇಶದ ಪ್ರಸಿದ್ಧ ತೀರ್ಥಕ್ಷೇತ್ರ ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಮತ್ತೆ ಹಲ್ಲೆ ನಡೆದಿದೆ. ರಾತ್ರಿ ಹೊತ್ತು ಮಲಗಿದ್ದ ಕರ್ನಾಟಕದ ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಕಿಡಿಗೇಡಿಗಳಿ ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ವಿಜಯಪುರ ಡಿಪೋಗೆ ಸೇರಿದ ಕೆಎಸ್‍ಆರ್‌ಟಿಸಿ ಬಸ್ ಗೆ ಕಿಡಿಗೇಡಿಗಳು ಕಲ್ಲು ತೂರಿದ್ದು ಕಿಟಕಿ ಗಾಜು ಪುಡಿ – ಪುಡಿಮಾಡಿದ್ದಾರೆ. ಕಟ್ಟೆಯ ಮೇಲೆ ಮಲಗಿದ್ದ ಬಸ್ ಚಾಲಕ ಬಸವರಾಜ್ ಬಿರಾದಾರ್ ಮೇಲೆ 10-12 ಜನರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದೆ.
ಅಶ್ಲೀಲವಾಗಿ ನಿಂದಿಸಿ, ಕರ್ನಾಟಕದವನು ಇಲ್ಲೇಕೆ ಇದ್ದೀಯಾ? ಅಂತಲೇ ಬಸ್ ಮೇಲೆ ಕಲ್ಲು ತೂರಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ಡ್ರೈವರ್ ಮುಖ, ಕಾಲಿಗೆ ಕಲ್ಲಿನಿಂದ ಹೊಡೆದಿದ್ದಾರೆ. ಚಾಲಕ ಬಸವರಾಜ್ ಸಹಾಯಕ್ಕಾಗಿ ಕೂಗಾಡಿದ್ದಾರೆ. ಕೂಡಲೇ ಇತರ ಚಾಲಕರು ಹಾಗೂ ನಿರ್ವಾಹಕರು ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆ ಪುಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಚಾಲಕನ ಮುಖ ಹಾಗೂ ಕಾಲಿನ ಭಾಗಕ್ಕೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಮಾರ್ಚ್ 31 ರಂದು ಯುಗಾದಿ ಸಂದರ್ಭದಲ್ಲಿ ನೀರಿಗಾಗಿ ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು. ಇದೀಗ ಮತ್ತೇ ಕ್ಯಾತೆ ತೆಗೆದು ಈ ದಾಳಿ ಮಾಡಲಾಗಿದೆ.







