ನವದೆಹಲಿ: ಶಾಸಕ ಸಿ.ಟಿ. ರವಿ (CT Ravi) ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ? ಅಥವಾ ಇಲ್ಲವೋ ಎಂಬುವುದರ ಸತ್ಯ ಸೋಧನೆಯಾಗಬೇಕು. ತನಿಖೆಯ ನಂತರವೇ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ದೆಹಲಿಯಲ್ಲಿ (New Delhi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಅವರ ಪ್ರಕರಣದಲ್ಲಿ ಪೊಲೀಸರ ನಡವಳಿಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಈ ಸರ್ಕಾರ ಯಾವುದೇ ಶಿಕ್ಷೆ ವಿಧಿಸಲಿಲ್ಲ. ಸಿ.ಟಿ.ರವಿಯವರು ತಾವು ಆ ರೀತಿ ಹೇಳಿಕೆ ನೀಡಲಿಲ್ಲ ಎಂದು ಹೇಳಿದ್ದಾರೆ. ಆದರೂ ಏಕಾಏಕಿ ಅರೆಸ್ಟ್ ಮಾಡಿದ್ದಾರೆ. ಸತ್ಯಶೋಧನೆ ಆಗದೇ ತನಿಖೆಯಾಗದೇ ಯಾವುದೇ ಅಂತಿಮನಿರ್ಧಾರಕ್ಕೆ ಬರುವುದು ತಪ್ಪು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಆಡಳಿತ ಹಳಿ ತಪ್ಪಿದೆ. ಪೊಲೀಸ್ ರಾಜ್ಯ ನಡೆಯುತ್ತಿದೆ. ಪ್ರತಿಯೊಂದಕ್ಕೂ ಪೋಲಿಸ್ ದುರ್ಬಳಕೆ ಆಗುತ್ತಿದೆ. ವಿರೋಧ ಪಕ್ಷಗಳ ಮೇಲೆ ದ್ವೇಷ ಸಾಧಿಸಲು ಹಲವಾರು ಎಸ್ ಐಟಿ ರಚನೆ ಮಾಡಿ ಹಲವಾರು ತನಿಖೆ ಮಾಡುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅವರ ವಿರುದ್ಧವೇ ತನಿಖೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆ ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದಾರೆ.