ಚೆನ್ನೈ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಬ್ಯಾಟ್ಸಮನ್ ಗಳು ಮುಗ್ಗರಿಸಿದ ವೇಳೆ ಬೌಲರ್ ಆರ್. ಅಶ್ವಿನ್ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲ, ಮತ್ತೋರ್ವ ಬೌಲರ್ ರವೀಂದ್ರ ಜಡೇಜಾ ಕೂಡ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದು, ಶತಕದ ಹತ್ತಿರ ಬಂದು ನಿಂತಿದ್ದಾರೆ.
ಭಾರತ (Team India) ಹಾಗೂ ಬಾಂಗ್ಲಾದೇಶ (Bangladesh) ನಡುವೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ (R Ashwin) ಶತಕ ಸಿಡಿಸಿದ್ದಾರೆ. ಕೇವಲ 108 ಎಸೆತಗಳಲ್ಲಿ 100 ರನ್ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 6ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. 144 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರತ ತಂಡ ಸಂಕಷ್ಟದಲ್ಲಿದ್ದಾಗ ಅಶ್ವಿನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 10 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸುವ ಮೂಲಕ ತಂಡದ ಗೌರವ ಕಾಪಾಡಿದರು. ಈ ಮೂಲಕ ತವರು ನೆಲದಲ್ಲಿ ಎರಡನೇ ಶತಕ ಸಿಡಿಸಿದರು.
ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಮುರಿಯದ 7ನೇ ವಿಕೆಟಿಗೆ 227 ಎಸೆತಗಳಲ್ಲಿ 195 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದ್ದಾರೆ. ಈ ಮೂಲಕ ಭಾರತ ತಂಡ ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ. ಅಶ್ವಿನ್ 102 ರನ್(112 ಎಸೆತ, 10 ಬೌಂಡರಿ, 2 ಸಿಕ್ಸ್), ರವೀಂದ್ರ ಜಡೇಜಾ ಔಟಾಗದೆ 86 ರನ್ (117 ಎಸೆತ, 10 ಬೌಂಡರಿ, 2 ಸಿಕ್ಸ್) ಸಿಡಿಸಿ, ಆಟವಾಡುತ್ತಿದ್ದಾರೆ.
ಮೊದಲ ದಿನದಾಟದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಅವರಂತಹ ಬ್ಯಾಟ್ಸ್‌ಮನ್‌ಗಳು 10 ಓವರ್‌ಗಳೊಳಗೆ ಪೆವಿಲಿಯನ್ ಸೇರಿಕೊಂಡರು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಬಾಂಗ್ಲಾ ಬೌಲರ್ ಗಳ ಬೆವರು ಇಳಿಸಿದರು.