ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಸುರಕ್ಷಿತ ಹೂಡಿಕೆ ಎಂದೇ ಕರೆಯಲ್ಪಡುವ ಚಿನ್ನದ ಸಾಮ್ರಾಜ್ಯದಲ್ಲಿ ಬಲವಾದ ಭೂಕಂಪ ಸಂಭವಿಸಿದೆ. ಯುದ್ಧದ ಭೀತಿ ಇದ್ದಾಗ ಸಾಮಾನ್ಯವಾಗಿ ಚಿನ್ನದ ಬೆಲೆ ಗಗನಕ್ಕೇರುವುದು ವಾಡಿಕೆ. ಆದರೆ, ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಯುದ್ಧದ ಕಾರ್ಮೋಡದ ನಡುವೆಯೂ ಚಿನ್ನದ ಬೆಲೆ ಪಾತಾಳಕ್ಕೆ ಕುಸಿದಿದ್ದು, ಹೂಡಿಕೆದಾರರನ್ನು ಕಂಗಾಲಾಗಿಸಿದೆ. ಮಾರುಕಟ್ಟೆ ವಿಶ್ಲೇಷಕ ಆಡಮ್ ಕೊಬೈಸ್ಸಿ ಅವರ ವರದಿಯ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಮಾರುಕಟ್ಟೆಯಲ್ಲಿ ಕಂಡುಬಂದಿರುವ ಈ ಒತ್ತಡ ಸಾಮಾನ್ಯವಾದದ್ದಲ್ಲ.
ಕೇವಲ ಮೂರೇ ಗಂಟೆಗಳ ವಹಿವಾಟಿನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹಗಳ ಮೌಲ್ಯದಲ್ಲಿ ಬರೋಬ್ಬರಿ 2 ಟ್ರಿಲಿಯನ್ ಡಾಲರ್‌ಗಳಷ್ಟು ಭಾರೀ ಕುಸಿತ ದಾಖಲಾಗಿದೆ. ಇರಾನ್ ಸೇರಿದಂತೆ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯು ತೈಲ ಮತ್ತು ಚಿನ್ನದ ಬೆಲೆಯನ್ನು ಹೆಚ್ಚಿಸಬೇಕಿತ್ತು. ಆದರೆ ಮಾರುಕಟ್ಟೆಯ ಈ ವಿಚಿತ್ರ ನಡೆ ಆರ್ಥಿಕ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಹಾಗಾದರೆ, ಚಿನ್ನದ ಈ ಹಠಾತ್ ಪತನಕ್ಕೆ ಯುದ್ಧ ಕಾರಣವಲ್ಲದಿದ್ದರೆ, ಮತ್ತೇನು?
ಅನಿರೀಕ್ಷಿತ ಕುಸಿತಕ್ಕೆ ಬಾಂಡ್ ಮಾರುಕಟ್ಟೆಯೇ ವಿಲನ್
ಈ ಆಘಾತಕಾರಿ ಕುಸಿತಕ್ಕೆ ಪ್ರಮುಖ ಕಾರಣ ಅಮೆರಿಕದ ಬಾಂಡ್ ಮಾರುಕಟ್ಟೆಯಲ್ಲಿ ಉಂಟಾದ ತೀವ್ರ ಏರಿಳಿತ. ಅಮೆರಿಕದ 10 ವರ್ಷದ ಖಜಾನೆ ಬಾಂಡ್‌ಗಳ ಇಳುವರಿಯು (US Treasury Yields) ಕೆಲವೇ ವಾರಗಳಲ್ಲಿ ಶೇ. 4.4 ರಷ್ಟು ಗರಿಷ್ಠ ಮಟ್ಟಕ್ಕೆ ಜಿಗಿದಿದೆ. ಇದು ಚಿನ್ನದ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಿದೆ.
ಇದರ ಅರ್ಥ ಸರಳ ಚಿನ್ನವು ತನ್ನ ಹೂಡಿಕೆದಾರರಿಗೆ ಯಾವುದೇ ಬಡ್ಡಿಯನ್ನು ನೀಡುವುದಿಲ್ಲ. ಆದರೆ, ಬಾಂಡ್ ಇಳುವರಿ ಹೆಚ್ಚಾದಾಗ, ಹೂಡಿಕೆದಾರರಿಗೆ ಖಚಿತವಾದ ಮತ್ತು ಹೆಚ್ಚಿನ ಬಡ್ಡಿ ಸಿಗುತ್ತದೆ. ಹೀಗಾಗಿ, ಜಾಗತಿಕ ಹೂಡಿಕೆದಾರರು ಬಡ್ಡಿ ನೀಡದ ಚಿನ್ನದಿಂದ ತಮ್ಮ ಹಣವನ್ನು ಹಿಂಪಡೆದು, ಸುರಕ್ಷಿತ ಆದಾಯ ನೀಡುವ ಅಮೆರಿಕನ್ ಬಾಂಡ್‌ಗಳತ್ತ ಮುಖ ಮಾಡಿದ್ದಾರೆ. ಇದೇ ಚಿನ್ನದ ಬೆಲೆ ಕುಸಿತಕ್ಕೆ ಪ್ರಮುಖ ಅಸ್ತ್ರವಾಗಿದೆ.
ಡಾಲರ್ ದರ್ಬಾರ್ ಮತ್ತು ಚಿನ್ನದ ಇಳಿಕೆ
ಚಿನ್ನದ ಕುಸಿತಕ್ಕೆ ಮತ್ತೊಂದು ಪ್ರಬಲ ಕಾರಣ ಅಮೆರಿಕನ್ ಡಾಲರ್‌ನ ಬಲವರ್ಧನೆ. ಜಾಗತಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಹೂಡಿಕೆದಾರರು ಈಗ ಚಿನ್ನಕ್ಕಿಂತ ಹೆಚ್ಚಾಗಿ ಡಾಲರ್ ಅನ್ನು ಹೆಚ್ಚು ಸುರಕ್ಷಿತ ಎಂದು ನಂಬುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಡಾಲರ್‌ನಲ್ಲಿ ನಿಗದಿಯಾಗುವುದರಿಂದ, ಡಾಲರ್ ಮೌಲ್ಯ ಹೆಚ್ಚಾದಾಗ ಸಹಜವಾಗಿಯೇ ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನ ದುಬಾರಿಯಾಗುತ್ತದೆ ಮತ್ತು ಅದರ ಬೇಡಿಕೆ ಕುಸಿಯುತ್ತದೆ. ಡಾಲರ್ ಈಗ ಹೂಡಿಕೆದಾರರಿಗೆ ಹೆಚ್ಚು ದ್ರವ್ಯತೆ (Liquidity) ಒದಗಿಸುವ ಸಾಧನವಾಗಿ ಮಾರ್ಪಟ್ಟಿದೆ.
ಮಾರುಕಟ್ಟೆಯ ಆಂತರಿಕ ವ್ಯವಸ್ಥೆಯ ವೈಫಲ್ಯ
ಕೇವಲ ಬಾಹ್ಯ ಕಾರಣಗಳಲ್ಲದೆ, ಮಾರುಕಟ್ಟೆಯ ಒಳಾಂಗಣದಲ್ಲೂ ನಡೆದ ತಾಂತ್ರಿಕ ಬದಲಾವಣೆಗಳು ಈ ಕುಸಿತಕ್ಕೆ ತುಪ್ಪ ಸುರಿದಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಅತಿಯಾಗಿ ಏರಿಕೆ ಕಂಡಿದ್ದವು. ಈ ಸಮಯದಲ್ಲಿ ಅನೇಕರು ಸಾಲದ ರೂಪದಲ್ಲಿ ಅಥವಾ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಮೂಲಕ ಭಾರಿ ಹೂಡಿಕೆ ಮಾಡಿದ್ದರು (Leveraged Positions).
ಯಾವಾಗ ಬೆಲೆಗಳು ಇಳಿಯಲು ಪ್ರಾರಂಭಿಸಿದವೋ, ಆಗ ಸ್ಟಾಪ್-ಲಾಸ್ ಆರ್ಡರ್‌ಗಳು (Stop-loss orders) ಸರಣಿಯೋಪಾದಿಯಲ್ಲಿ ಸಕ್ರಿಯಗೊಂಡವು. ಇದರಿಂದ ಬ್ರೋಕರ್‌ಗಳು ಮಾರ್ಜಿನ್ ಕಾಲ್‌ಗಳನ್ನು ನೀಡಲಾರಂಭಿಸಿದರು. ನಷ್ಟವನ್ನು ಸರಿದೂಗಿಸಲು ಹೂಡಿಕೆದಾರರು ಅನಿವಾರ್ಯವಾಗಿ ತಮ್ಮ ಬಳಿಯಿದ್ದ ಚಿನ್ನವನ್ನು ಮಾರುಕಟ್ಟೆಗೆ ಸುರಿಯಬೇಕಾಯಿತು. ಇದನ್ನು ಬಲವಂತದ ಮಾರಾಟ (Forced Selling) ಎನ್ನಲಾಗುತ್ತದೆ. ಇದರಿಂದ ಮಾರುಕಟ್ಟೆಯಲ್ಲಿ ದ್ರವ್ಯತೆ ಕೊರತೆ ಉಂಟಾಗಿ ಬೆಲೆಗಳು ಕ್ಷಣಮಾತ್ರದಲ್ಲಿ ಕುಸಿದವು.
ಬೆಂಗಳೂರು ಮೂಲದ ಹಿರಿಯ ಟ್ರೇಡರ್ ಅವರ ಪ್ರಕಾರ, ಇದು ಮಾರುಕಟ್ಟೆಯ ಸಾಮಾನ್ಯ ತಿದ್ದುಪಡಿ ಅಲ್ಲ, ಬದಲಾಗಿ ಇದೊಂದು ಬಲವಂತದ ಡೆಲಿವರೇಜಿಂಗ್ (Forced Deleveraging) ಪ್ರಕ್ರಿಯೆ. ಬಡ್ಡಿದರಗಳ ಏರಿಕೆಯು ಎಲ್ಲ ಆಸ್ತಿಗಳ ಮೌಲ್ಯಮಾಪನವನ್ನು ಬದಲಿಸುತ್ತಿದ್ದು, ಹೂಡಿಕೆದಾರರು ತಮ್ಮ ನಷ್ಟವನ್ನು ಭರಿಸಲು ಚಿನ್ನ ಮತ್ತು ಬೆಳ್ಳಿಯನ್ನು ಮಾರಾಟ ಮಾಡುತ್ತಿದ್ದಾರೆ.
ಭಾರತೀಯ ಮಾರುಕಟ್ಟೆಯ ಮೇಲೂ ಇದರ ಪರಿಣಾಮ ದಟ್ಟವಾಗಿದೆ. MCX ನಲ್ಲಿ ಚಿನ್ನ ಮತ್ತು ಬೆಳ್ಳಿಯ ಫ್ಯೂಚರ್ಸ್‌ಗಳು ಕುಸಿದಿದ್ದು, ಚಿನ್ನದ ಇಟಿಎಫ್‌ಗಳು (ETF) ಶೇ. 6 ರಿಂದ ಶೇ. 9 ರಷ್ಟು ನಷ್ಟ ಕಂಡಿವೆ.
ಚಿನ್ನ ಇನ್ನು ಮುಂದೆ ಸುರಕ್ಷಿತವಲ್ಲವೇ?
ಈ ಘಟನೆಯು ಹೂಡಿಕೆದಾರರಲ್ಲಿ ಚಿನ್ನ ಸುರಕ್ಷಿತ ಆಶ್ರಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದರೆ ತಜ್ಞರ ಪ್ರಕಾರ, ಚಿನ್ನ ತನ್ನ ಮೌಲ್ಯವನ್ನೇನೂ ಕಳೆದುಕೊಂಡಿಲ್ಲ. ಆದರೆ ಅದರ ವರ್ತನೆ ಬದಲಾಗಿದೆ.
ಹಿಂದೆ ಚಿನ್ನವು ಕೇವಲ ಯುದ್ಧ ಅಥವಾ ಭಯದ ವಾತಾವರಣಕ್ಕೆ ಸ್ಪಂದಿಸುತ್ತಿತ್ತು.
ಆದರೆ ಈಗಿನ ಹೊಸ ಆರ್ಥಿಕ ವ್ಯವಸ್ಥೆಯಲ್ಲಿ, ಚಿನ್ನವು ಬಡ್ಡಿದರಗಳು, ದ್ರವ್ಯತೆ ಮತ್ತು ಕರೆನ್ಸಿ ಮೌಲ್ಯಗಳಿಗೆ ಹೆಚ್ಚು ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿದೆ.
ತೈಲ ಬೆಲೆ ಏರಿಕೆಯಿಂದ ಹಣದುಬ್ಬರ ಹೆಚ್ಚಾಗಲಿದ್ದು, ಅದನ್ನು ನಿಯಂತ್ರಿಸಲು ಬಡ್ಡಿದರಗಳನ್ನು ಹೆಚ್ಚಿಸುವುದು ಅನಿವಾರ್ಯ ಎಂಬುದು ಚಿನ್ನಕ್ಕೆ ನಕಾರಾತ್ಮಕವಾಗಿ ಪರಿಣಮಿಸಿದೆ.
ಅಂತಿಮವಾಗಿ ಹೂಡಿಕೆದಾರರು ತಿಳಿಯಬೇಕಾದದ್ದು ಇಷ್ಟೇ
ಇದು ಚಿನ್ನದ ಅಂತ್ಯವಲ್ಲ, ಬದಲಾಗಿ ಭಾರೀ ಏರಿಕೆಯ ನಂತರದ ತಾಂತ್ರಿಕ ತಿದ್ದುಪಡಿ. ಸದ್ಯದ ಮಟ್ಟಿಗೆ ಚಿನ್ನದ ಬೆಲೆಯನ್ನು ಯುದ್ಧ ನಿಯಂತ್ರಿಸುತ್ತಿಲ್ಲ, ಬದಲಾಗಿ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳು ನಿಯಂತ್ರಿಸುತ್ತಿವೆ. ಹೂಡಿಕೆದಾರರು ಆತಂಕಪಡುವ ಅಗತ್ಯವಿಲ್ಲದಿದ್ದರೂ, ಚಿನ್ನವು ಈಗ ಹಳೆಯ ಕಾಲದಂತೆ ಕೇವಲ ಸುರಕ್ಷಿತ ಆಸ್ತಿಯಾಗಿ ಉಳಿದಿಲ್ಲ, ಅದು ಜಾಗತಿಕ ಆರ್ಥಿಕ ಬದಲಾವಣೆಗಳಿಗೆ ತಕ್ಕಂತೆ ತನ್ನ ನಡವಳಿಕೆಯನ್ನು ಬದಲಿಸಿಕೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.







